ಹಣ್ಣು ಖರೀದಿಸಲು ಕ್ವಾರಂಟೈನ್ ಕೇಂದ್ರದಿಂದ ಹೊರಬಂದ ವಲಸೆ ಕಾರ್ಮಿಕರು

Public TV
1 Min Read

– ಕೊರೊನಾ ಅಂಟುವ ಭಯದಲ್ಲಿ ಹಳ್ಳಿಯ ಜನ
– ಯಾದಗಿರಿಯಲ್ಲಿ ಶನಿವಾರ ಒಂದೇ ದಿನ 72 ಪ್ರಕರಣ ಪತ್ತೆ

ಯಾದಗಿರಿ: ಕ್ವಾರಂಟೈನ್ ಕೇಂದ್ರಗಳೆಂದರೆ ಹಾಸ್ಟೆಲ್ ಆದಂತಾಗಿದ್ದು, ಯಾವಾಗ ಬೇಕಾದರೂ ಹೊರಗೆ ಬರಬಹುದು, ಯಾವಾಗ ಬೇಕಾದರೂ ಒಳಗೆ ಹೋಗಬಹುದು ಎನ್ನುವಂತಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಭಾನುವಾರ ಶಹಪುರ ತಾಲೂಕಿನ ಬೇವಿನಹಳ್ಳಿ ಕ್ವಾರೆಂಟೈನ್ ಕೇಂದ್ರದ ವಲಸೆ ಕಾರ್ಮಿಕರು ಹಣ್ಣು ಕೊಳ್ಳಲು ಹೊರಗಡೆ ಬಂದಿದ್ದಾರೆ. ಇದರಿಂದಾಗಿ ಇದೀಗ ಹಳ್ಳಿಯ ಜನರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಈಗಾಗಲೇ ಯಾದಗಿರಿಯಲ್ಲಿ ಕೊರೊನಾ ಸ್ಫೋಟ ಸಂಭವಿಸಿದ್ದು, ಸೋಂಕಿತರ ಸಂಖ್ಯೆ ನೂರರ ಗಡಿ ತಲುಪುತ್ತಿದೆ. ಇಂತಹ ಸಂದರ್ಭದಲ್ಲಿ ಕ್ವಾರಂಟೈನ್‍ನಲ್ಲಿದ್ದವರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.

ಈಗಾಗಲೇ ಕ್ವಾರಂಟೈನ್ ಮಾಡಿದವರಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರ ನಡುವೆಯೇ ಕ್ವಾರಂಟೈನ್ ಕೇಂದ್ರದಿಂದ ಹೊರ ಬಂದು, ಹಣ್ಣು ಖರೀಸುವ ನೆಪದಲ್ಲಿ ರಸ್ತೆಯಲ್ಲಿ ಸಂಚಾರ ಮಾಡಿದರೆ, ಮತ್ತೊಬ್ಬರನ್ನು ಸಂಪರ್ಕಿಸಿದರೆ ಮತ್ತೆ ಕೊರೊನಾ ಸ್ಫೋಟ ಸಂಭವಿಸುತ್ತದೆ. ಇದಾವುದನ್ನು ಅರಿಯದ ಕ್ವಾರಂಟೈನ್‍ನಲ್ಲಿರುವವರು, ಆರಾಮಾಗಿ ಹೊರ ಬರುತ್ತಿದ್ದಾರೆ. ಇದರಿಂದ ಜನ ಆತಂಕಗೊಂಡಿದ್ದಾರೆ. ಹೀಗಾಗಿ ಕ್ವಾರಂಟೈನ್ ಕೇಂದ್ರದಲ್ಲಿದ್ದವರು ಹೊರಗೆ ಬರುತ್ತಿರುವುದನ್ನು ಕಂಡು ಸ್ಥಳೀಯರು ತಡೆದಿದ್ದು, ಕ್ವಾರಂಟೈನ್ ನಲ್ಲಿದ್ದರೂ ಹೊರಗಡೆ ಯಾಕೆ ಬಂದಿದ್ದೀರಿ, ವಾಪಾಸ್ ಹೋಗಿ ಎಂದು ಕಳುಹಿಸಿದ್ದಾರೆ.

ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ಸಮೀಪಿಸುತ್ತಿದ್ದು, ಇಂದು ಮತ್ತೆ 5 ಪಾಸಿಟಿವ್ ಪ್ರಕರಣ ಬರುವ ಸಾಧ್ಯತೆ ಇದೆ. ಸದ್ಯ 87 ಕೊರೊನಾ ಪ್ರಕರಣಗಳಿದ್ದು, ಇಂದು 92ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲೆಗೆ ಮಹಾರಾಷ್ಟ್ರ ಕಂಟಕ ಎದುರಾಗಿದ್ದು, ಮಹಾರಾಷ್ಟ್ರದಿಂದ ಬಂದವರಲ್ಲಿ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಶನಿವಾರ ಒಂದೇ ದಿನ 72 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದವು. ಈಗ ಮತ್ತೆ 5 ಕೊರೊನಾ ಪ್ರಕರಣಗಳು ಪತ್ತೆಯಾಗುವ ಸಂಭವವಿದೆ. ಸಾಲು ಸಾಲು ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನೆಲೆ ಯಾದಗಿರಿ ಜನ ಭಯ ಭೀತರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *