ಸ್ವಾತಂತ್ರ್ಯಾ ನಂತರ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮೊದಲ ಮಹಿಳೆ- ಜೈಲಿನಲ್ಲಿ ಸಕಲ ತಯಾರಿ

Public TV
2 Min Read

– ಕೊನೆಯ ಹಂತದ ಸಿದ್ಧತೆಗೆ ಕಾಯುತ್ತಿದ್ದೇವೆಂದ ಕುಟುಂಬಸ್ಥರು

ಲಕ್ನೋ: ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳಿಗೆ ಗಲ್ಲು ಶಿಕ್ಷೆ ಪ್ರಕಟವಾಗಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದ್ದು, ಇದೀಗ ಈ ಕೊಲೆ ಪಾತಕಿಯನ್ನು ಗಲ್ಲಿಗೇರಿಸಲು ಮಥುರಾ ಜೈಲಿನಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ.

ಪ್ರಿಯಕರನಿಗಾಗಿ ಅಪ್ಪ, ಅಮ್ಮ ಸೇರಿದಂತೆ 7 ಮಂದಿ ಕುಟುಂಬಸ್ಥರನ್ನು ರಾಕ್ಷಸಿ ರೀತಿಯಲ್ಲಿ ಕೊಲೆ ಮಾಡಿದ್ದ ಮಹಿಳೆ ಶಬ್ನಮ್‍ಗೆ ಶೆಷನ್ಸ್ ಕೋರ್ಟ್‍ನಿಂದ ಸುಪ್ರೀಂ ಕೋರ್ಟ್ ವರೆಗೆ ಗಲ್ಲು ಶಿಕ್ಷೆಯೇ ಗತಿಯಾಗಿದೆ. ಅಲ್ಲದೆ ರಾಷ್ಟ್ರಪತಿಗಳ ಕ್ಷಮಾದಾನ ಸಹ ತಿರಸ್ಕೃತಗೊಂಡಿದೆ.

ಶಬ್ನಮ್ 2008ರಲ್ಲಿ ತನ್ನ ಪ್ರಿಯಕರಿನಾಗಿ ಅಪ್ಪ, ಅಮ್ಮ ಸೇರಿ 7 ಜನ ಕುಟುಂಬಸ್ಥರನ್ನು ಕೊಲೆ ಮಾಡಿದ್ದಾಳೆ. ಹೀಗಾಗಿ ಅಮ್ರೋಹ ಜಿಲ್ಲಾ ನ್ಯಾಯಾಲಯ ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಿದ್ದು, ಬಳಿಕ ತೀರ್ಪು ಪ್ರಶ್ನಿಸಿ ಅಲಹಬಾದ್ ಹೈ ಕೋರ್ಟ್‍ನಲ್ಲಿ ಇವರಿಬ್ಬರು ಮೇಲ್ಮನವಿ ಸಲ್ಲಿಸಿದ್ದರು. ಅಲ್ಲಿಯೂ ಅರ್ಜಿ ತಿರಸ್ಕಾರಗೊಂಡ ಬಳಿಕ ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಆದರೆ ಎರಡೂ ನ್ಯಾಯಾಲಯಗಳು ಇದೀಗ ಅರ್ಜಿಯನ್ನು ತಿರಸ್ಕರಿಸಿದ್ದು, ಗಲ್ಲು ಶಿಕ್ಷೆಯೇ ಗತಿಯಾಗಿದೆ. ಕೊನೆಯ ಪ್ರಯತ್ನವಾಗಿ ರಾಷ್ಟ್ರಪತಿಗಳ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇದೂ ಸಹ ತಿರಸ್ಕಾರಗೊಂಡಿದೆ.

ಇದೀಗ ಅಪರಾಧಿಗಳಾದ ಶಬ್ನಮ್ ಹಾಗೂ ಸಲೀಮ್ ಡೆತ್ ವಾರೆಂಟ್ ಯಾವಾಗ ಬೇಕಾದರೂ ಬರಬಹುದು. ಶಬ್ನಮ್‍ಳನ್ನು ರಾಮ್‍ಪುರ ಜೈಲಿನಲ್ಲಿರಿಸಲಾಗಿದ್ದು, ಮಥುರಾ ಜೈಲಿನಲ್ಲಿ ಗಲ್ಲಿಗೇರಿಸಲು ಸಿದ್ಧತೆ ನಡೆಸಲಾಗಿದೆ. ಆಶ್ಚರ್ಯವೆಂದರೆ ಈಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಗಲ್ಲಿಗೇರುತ್ತಿರುವ ಮೊದಲ ಮಹಿಳೆಯಾಗಿದ್ದಾಳೆ. ಈ ಇಬ್ಬರನ್ನು ಗಲ್ಲಿಗೇರಿಸಲು ಮಥುರಾ ಜೈಲಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ್ದ ಪವನ್ ಜಲ್ಲದ್ ಅವರೇ ನೇಣಿಗೇರಿಸಲಿದ್ದಾರೆ.

ಶಬ್ನಮ್ ಯಾರು, ಏನಿದು ಪ್ರಕರಣ?
ಉತ್ತರ ಪ್ರದೇಶದ ಅಮ್ರೋಹಾದ ಬವಾಂಖೇಡಿ ಗ್ರಾಮದಲ್ಲಿ ಈ ಕೊಲೆ ನಡೆದು 13 ವರ್ಷಗಳು ಕಳೆದಿದ್ದು, 2008ರ ಏಪ್ರಿಲ್ 14 ರಂದು ಕೃತ್ಯ ನಡೆದ ಸಂದರ್ಭ ನೆನೆದರೆ ಗ್ರಾಮಸ್ಥರು ಇಂದಿಗೂ ಬೆಚ್ಚಿಬೀಳುತ್ತಾರೆ. ಪ್ರಿಯತಮನಿಗಾಗಿ ತನ್ನ ಅಪ್ಪ, ಅಮ್ಮ ಸೇರಿ 7 ಜನ ಕುಟುಂಬಸ್ಥರನ್ನು ಕೊಚ್ಚಿ ಕೊಲೆ ಮಾಡಿದ್ದಳು.

ಶಬ್ನಮ್ ಎಂಎ ಇಂಗ್ಲಿಷ್ ಹಾಗೂ ಭೂಗೋಳಶಾಸ್ತ್ರದಲ್ಲಿ ಎಂಎ ಮಾಡಿದ್ದು, ತನ್ನ ಮನೆ ಬಳಿ ಇದ್ದ 6ನೇ ತರಗತಿಗೆ ಶಾಲೆ ಬಿಟ್ಟ ಸಲೀಮ್‍ನನ್ನು ಪ್ರೀತಿಸುತ್ತಿದ್ದಳು. ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ತನ್ನ ಮನೆಯ ಮೇಲೆಯೇ ಪ್ರಿಯತಮನ ಮೂಲಕ ಶಬ್ನಮ್ ದಾಳಿ ನಡೆಸಿದ್ದಳು. ಈ ವೇಳೆ ಮನೆಯವರಿಗೆ ಮತ್ತು ಬರುವ ಔಷಧಿ ನೀಡಿದ್ದಳು. ತನ್ನ ಪ್ರಿಯಕರನೊಂದಿಗೆ ಸೇರಿ 7 ಜನ ಕುಟುಂಬಸ್ಥರನ್ನು ಕೊಲೆ ಮಾಡಿದ್ದಳು.

ಸಲೀಮ್ ಶಬ್ನಮ್ ಮನೆಯ ಬಳಿಯೇ ಕಟ್ಟಿಗೆ ಯುನಿಟ್‍ನಲ್ಲಿ ಕೆಲಸ ಮಾಡುತ್ತಿದ್ದ. ಕೊಲೆ ಪ್ರಕರಣವನ್ನು ಅಮ್ರೋಹ ನ್ಯಾಯಾಲಯ ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿತ್ತು. 2015ರಲ್ಲಿ ಅಲಹಬಾದ್ ಹೈ ಕೋರ್ಟ್‍ನ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಮರಣದಂಡನೆ ಶಿಕ್ಷೆ ವಿಧಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *