ನವದೆಹಲಿ: ಕೊರೊನಾ ವೈರಸ್ ಕಾರಣದಿಂದ ದೇಶದಲ್ಲಿ ಲಾಕ್‍ಡೌನ್ ವಿಧಿಸಲಾಗಿದ್ದು, ಪರಿಣಾಮ ಐಸಿಸಿ ಅಂಪೈರ್ ಅನಿಲ್ ಚೌಧರಿ ತಮ್ಮ ಸ್ವಗ್ರಾಮದಲ್ಲೇ ಉಳಿದುಕೊಂಡಿದ್ದಾರೆ. ಅಲ್ಲದೇ ತಮ್ಮ ಗ್ರಾಮದಲ್ಲಿ ಮೊಬೈಲ್ ಸಿಗ್ನಲ್ ಸಿಗದ ಕಾರಣ ಸದ್ಯ ನೆಟ್‍ವರ್ಕ್ ವ್ಯವಸ್ಥೆ ಮಾಡಿಸಿದ್ದಾರೆ.
ಚೀನಿ ವೈರಸ್ ಕಾರಣದಿಂದ ಕ್ರೀಡಾ ಜಗತ್ತು ಕಳೆದ 3-4 ತಿಂಗಳಿನಿಂದ ಸ್ತಬ್ಧಗೊಂಡಿದ್ದು, ಹಲವು ಕ್ರಿಕೆಟ್ ಟೂರ್ನಿಗಳು ಸಹ ಮುಂದೂಡಲ್ಪಿಟ್ಟಿವೆ. ಪರಿಣಾಮ ಐಸಿಸಿ ಅಂಪೈರ್ ಆಗಿರುವ ಅನಿಲ್ ಚೌಧರಿ ಉತ್ತರದ ಪ್ರದೇಶದ ಡಾಂಗ್ರೋಲ್ ಬಳಿಯ ತಮ್ಮ ಸ್ವಗ್ರಾಮದ ಮನೆಯಲ್ಲೇ ತಮ್ಮ ಇಬ್ಬರು ಪುತ್ರರೊಂದಿಗೆ ಉಳಿದುಕೊಂಡಿದ್ದಾರೆ.
ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಅನಿಲ್ ಅವರಿಗೆ ನೆಟ್‍ವರ್ಕ್ ಸಮಸ್ಯೆ ಬಹುದೊಡ್ಡದಾಗಿ ಕಾಡಿತ್ತು. ಅಲ್ಲದೇ ಮೊಬೈಲ್ ಸಿಗ್ನಲ್ ಪಡೆಯಲು ಮರವನ್ನೇರಿದ್ದರು. ಬಳಿಕ ಮೊಬೈಲ್ ನೆಟ್‍ವರ್ಕ್ ಸಂಸ್ಥೆಗಳೊಂದಿಗೆ ಮಾತನಾಡಿದ ಅವರು ಗ್ರಾಮಕ್ಕೆ ಮೊಬೈಲ್ ಟವರ್ ವ್ಯವಸ್ಥೆ ಮಾಡಿಸಿದ್ದಾರೆ.
ಅನಿಲ್ ಅವರ ಈ ಕಾರ್ಯದಿಂದ ಗ್ರಾಮಸ್ಥರು ಖುಷಿಯಾಗಿದ್ದಾರೆ. ಸದ್ಯ ಯಾವುದೇ ಸಮಸ್ಯೆ ಇಲ್ಲದೇ ಸಂಬಂಧಿಗಳೊಂದಿಗೆ ಮಾತನಾಡುತ್ತಿದ್ದಾರೆ. ಮಕ್ಕಳು ಆನ್‍ಲೈನ್ ಕ್ಲಾಸ್‍ಗೆ ಹಾಜರಾಗುತ್ತಿದ್ದಾರೆ. ನಾನು ಕೂಡ ಐಸಿಸಿ ವಿಡಿಯೋ ಕಾನ್ಫರೆನ್ಸ್, ವರ್ಕ್ ಶಾಪ್‍ಗಳಿಗೆ ಗ್ರಾಮದಿಂದಲೇ ಹಾಜರಾಗುತ್ತಿದ್ದೇನೆ ಎಂದು ಅನಿಲ್ ಚೌಧರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಏಪ್ರಿಲ್‍ನಲ್ಲಿ ಗ್ರಾಮದಲ್ಲಿದ್ದ ನೆಟ್‍ವರ್ಕ್ ಸಮಸ್ಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅನಿಲ್ ಅವರು, ದೆಹಲಿಯಲ್ಲಿರುವ ತಮ್ಮ ಪತ್ನಿ ಹಾಗೂ ಐಸಿಸಿ ಕಾನ್ಫರೆನ್ಸ್‍ಗಳಿಗೆ ಹಾಜರಾಗಲು ಗ್ರಾಮದ ಹೊರವಲಯದ ಎತ್ತರದ ಮರವೇರಿ ಮಾತನಾಡಬೇಕಿದೆ ಎಂದು ತಿಳಿಸಿದ್ದರು. ಇತ್ತ ಮತ್ತಷ್ಟು ಸಮಯದ ಅನಿಲ್ ಚೌಧರಿ ತಮ್ಮ ಸ್ವಗ್ರಾಮದಲ್ಲೇ ಇರುವ ಅವಕಾಶವಿದೆ.