ಸ್ವಂತ ಜಮೀನಿಲ್ಲ, ಪಾಳುಬಿದ್ದ ಭೂಮಿ ಗೇಣಿ ಪಡೆದು ಉಳುಮೆಗೆ ಹೊರಟ ಶಾಸಕಿ!

Public TV
2 Min Read

ಕಾರವಾರ: ಜನಪ್ರತಿನಿಧಿಗಳು ಬಹುತೇಕ ಭಾಷಣಕ್ಕೆ ಸೀಮಿತವಾಗಿರುತ್ತಾರೆ. ಆದರೆ ಇಲ್ಲೊಬ್ಬ ಶಾಸಕಿ ತಮ್ಮ ಬಳಿ ಜಮೀನು ಇಲ್ಲದಿದ್ದರೂ, ಬೇರೊಬ್ಬರ ಜಮೀನನ್ನು ಗೇಣಿಗೆ ಪಡೆದು ಗದ್ದೆಯಲ್ಲಿ ಕೃಷಿ ಮಾಡಲು ಹೊರಟಿದ್ದಾರೆ.

ಶಾಸಕರು ಎಂದರೆ ಸದಾ ಭಾಷಣ ಬಿಗಿದು, ಆಶ್ವಾಸನೆ ಕೊಟ್ಟು, ಎಸಿ ಕಾರಿನಲ್ಲಿ ಕುಳಿತು ಕ್ಷೇತ್ರ ಸುತ್ತುವುದಕ್ಕಷ್ಟೇ ಸೀಮಿತವಾಗಿರುವಾಗ ಕಾರವಾರ-ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಇದೀಗ ತಮ್ಮ ಕ್ಷೇತ್ರದಲ್ಲಿ ಹಲವು ವರ್ಷದಿಂದ ಪಾಳುಬಿದ್ದ ಕೃಷಿ ಜಮೀನಿನಲ್ಲಿ ಹಸಿರು ಕ್ರಾಂತಿಗೆ ಮುಂದಾಗಿದ್ದಾರೆ. ತಮ್ಮ ಬಳಿ ಕೃಷಿ ಜಮೀನು ಇಲ್ಲದಿದ್ದಕ್ಕೆ ಕ್ಷೇತ್ರದಲ್ಲಿ ಬಿತ್ತನೆ ಮಾಡದೇ ಪಾಳು ಬಿಟ್ಟ 50 ಎಕರೆ ಕೃಷಿ ಜಮೀನನ್ನು ರೈತರಿಂದ ಗೇಣಿ ರೂಪದಲ್ಲಿ ಪಡೆದು, ಸ್ವತಃ ತಾವೇ ಕೃಷಿ ಮಾಡಲು ಹೊರಟಿದ್ದಾರೆ.

ಕೃಷಿ ಬಗ್ಗೆ ಇವರಿಗೆ ಆಸಕ್ತಿ ಬರಲು ಕಾರಣ ಸಹ ಇದೆ. ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ನೂರಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಪ್ರದೇಶ ಹಲವು ವರ್ಷಗಳಿಂದ ಪಾಳು ಬಿದ್ದಿದ್ದು, ಕೃಷಿಯಲ್ಲಿ ಲಾಭ ಸಿಗದ ಕಾರಣ ಹಾಗೂ ಚಿಕ್ಕ ತುಂಡು ಜಮೀನುಗಳೇ ಕ್ಷೇತ್ರದಲ್ಲಿ ಹೆಚ್ಚಿದ್ದರಿಂದ ರೈತರು ಕೃಷಿಯಿಂದ ವಿಮುಖರಾಗಿ, ಕೂಲಿ ಕೆಲಸ ಸೇರಿದಂತೆ ಇತರೆ ಕೆಲಸದಲ್ಲಿ ನಿರತರಾಗಿದ್ದಾರೆ. ಅಲ್ಪ ಮಟ್ಟಿಗೆ ಓದಿದ ಕೃಷಿಕರು ಗೋವಾದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತಿದ್ದಾರೆ. ಇದನ್ನು ಮನಗಂಡ ಶಾಸಕಿ, ತಾವೇ ಖುದ್ದು ಕೃಷಿಗೆ ಮುಂದಾಗಿದ್ದಾರೆ.

ಇದಕ್ಕಾಗಿ ರೈತರ ಬಳಿ ಜಮೀನನ್ನು ಗೇಣಿಗೆ ಪಡೆದು ವೈಜ್ಞಾನಿಕ ಪದ್ಧತಿಯಂತೆ ಕೃಷಿ ಪ್ರಾರಂಭಿಸಿದ್ದಾರೆ. ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಉಪಕರಣವನ್ನು ಖರೀದಿಸಿದ್ದಾರೆ. ಕಳೆದ ಎರಡು ದಿನದ ಹಿಂದೆ ಅಂಕೋಲದ ವಂದಿಗೆ ಗ್ರಾಮದಲ್ಲಿ 25 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ಭೂಮಿ ಉಳುಮೆ ಮಾಡಿದ್ದಾರೆ. ಇದೀಗ ಮತ್ತೆ ಕಾರವಾರದ ಅರಗಾ ಬಳಿಯ ದೋಲ್ ಗ್ರಾಮದಲ್ಲಿ 15 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ಇಂದು ತಾವೇ ಟ್ರಾಕ್ಟರ್ ಚಲಾಯಿಸಿ, ಭೂಮಿ ಹದಗೊಳಿಸಿದರು.

ಮಾತ್ರವಲ್ಲದೆ ಗ್ರಾಮದಲ್ಲಿ ಕೃಷಿ ತ್ಯಜಿಸಿದ ಜನರನ್ನು ಒಟ್ಟುಗೂಡಿಸಿ, ತಮ್ಮ ಕಾರ್ಯಕ್ಕೆ ಅವರನ್ನೂ ಸಹಭಾಗಿಯನ್ನಾಗಿಸಿಕೊಂಡಿದ್ದಾರೆ. ಸದ್ಯ ಮಳೆಗಾಲ ಪ್ರಾರಂಭವಾಗಿರುವುದರಿಂದ ಮೊದಲು ಭತ್ತ ಬೆಳೆಯಲು ಶಾಸಕರು ಮುಂದಾಗಿದ್ದಾರೆ. ನಂತರ ತರಕಾರಿ ಹೀಗೆ ಒಂದು ವರ್ಷದಲ್ಲಿ ಮೂರು ಬೆಳೆ ಬೆಳೆಯುವ ಗುರಿ ಇಟ್ಟುಕೊಂಡು ಅದಕ್ಕಾಗಿ ಸಮಯ ವಿನಿಯೋಗಿಸುತ್ತಿದ್ದಾರೆ.

ಕಾರ್ಮಿಕರ ಕೊರತೆ ಹಿನ್ನೆಲೆ ಕೃಷಿಗಾಗಿ ತಂದ ಯಂತ್ರೋಪಕರಣವನ್ನು ಸಹ ಕೃಷಿ ಮಾಡಲು ಆಸಕ್ತರಿರುವವರಿಗೆ ಬಳಸಲು ಅವಕಾಶ ನೀಡಿದ್ದಾರೆ. ಇವರ ಕಾರ್ಯದಿಂದ ಉತ್ತೇಜನಗೊಂಡ ಹಲವು ರೈತರು, ಕೃಷಿ ಮಾಡಲು ಗೇಣಿ ರೂಪದಲ್ಲಿ ಇವರಿಗೆ ಭೂಮಿ ನೀಡಲು ಮುಂದಾಗಿದ್ದಾರೆ. ತಮ್ಮ ಕ್ಷೇತ್ರ ಹಸಿರಿನಿಂದ ಕಂಗೊಳಿಸಬೇಕು, ಕಾರವಾರದಲ್ಲಿ ಕಾರ್ಯವೇ ಇಲ್ಲದೇ ಮುಚ್ಚುವ ಹಂತದಲ್ಲಿರುವ ಎಪಿಎನ್ ಸಿ ಯಲ್ಲಿ ಕೃಷಿ ಉತ್ಪನ್ನಗಳ ವಹಿವಾಟು ನಡೆಯಬೇಕು ಎಂಬ ಉದ್ದೇಶ ಶಾಸಕರದ್ದಾಗಿದೆ. ಮುಂದಿನ ದಿನಗಳಲ್ಲಿ ಹೈನುಗಾರಿಕೆ, ಕಬ್ಬು, ಜೋಳ ಹೀಗೆ ಕೃಷಿ ಚಟುವಟಿಕೆಯನ್ನು ವೃದ್ಧಿಸುವ ಗುರಿ ಹೊಂದಿದ್ದಾರೆ.

ಸದಾ ರಾಜಕೀಯದಲ್ಲೇ ಕಾಲ ಕಳೆಯುವ ರಾಜಕಾರಣಿಗಳ ನಡುವೆ ಕೃಷಿ ಮಾಡಲು ಹೊರಟ ಕಾರವಾರದ ಶಾಸಕಿ ಪ್ರತ್ತೇಜಕವಾಗಿ ನಿಲ್ಲುತ್ತಾರೆ. ತಮ್ಮ ಕ್ಷೇತ್ರದಲ್ಲಿ ಇಳಿಮುಖವಾಗುತ್ತಿರುವ ಕೃಷಿ ಚಟುವಟಿಕೆಯನ್ನು ಚಿಗುರಿಸಲು ಪಣತೊಟ್ಟಿರುವ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *