ಸ್ಯಾಂಡಲ್‍ವುಡ್ ನಟನ ಮಗನಿಗೂ, ನಟಿಗೆ ಸಿಸಿಬಿ ನೋಟಿಸ್ ಸಾಧ್ಯತೆ

Public TV
2 Min Read

-ರಾಜಕಾರಣಿಗಳಿಗೂ ಶುರುವಾಯ್ತು ಢವ ಢವ!

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‍ವುಡ್ ಹಿರಿಯ ನಟರೊಬ್ಬರ ಮಗ ಮತ್ತು ಓರ್ವ ನಟಿಗೆ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆಗಳಿವೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ. ಇಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕರಾದ ಅಕುಲ್ ಬಾಲಾಜಿ, ಸಂತೋಷ್ ಕುಮಾರ್ ಮತ್ತು ಮಾಜಿ ಶಾಸಕ ಆರ್.ವಿ.ದೇವರಾಜ್ ಪುತ್ರ ಆರ್.ವಿ.ಯುವರಾಜ್ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಈ ಮೂವರ ವಿಚಾರಣೆ ಬಳಿಕ ನಟನ ಮಗನಿಗೆ ಸಿಸಿಬಿ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ನಟನ ಮಗ ಪದೇ ಪದೇ ಉದ್ಯಮಿ ಜೊತೆ ಕಾಣಿಸಿಕೊಂಡಿರೋದು ಸಿಸಿಬಿ ಗಮನಕ್ಕೆ ಬಂದಿದೆ. ಇತ್ತ ಓರ್ವ ಖ್ಯಾತ ನಟಿಯ ಹೆಸರು ಡ್ರಗ್ಸ್ ಜಾಲದಲ್ಲಿ ಕೇಳಿ ಬಂದಿದ್ದು, ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಬಹುದು. ನಶೆಯ ನಂಟಿನ ಹಿನ್ನೆಲೆ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಗುಳಿ ಕೆನ್ನೆ ದಂಪತಿ ಐಂದ್ರಿತಾ ಮತ್ತು ದಿಗಂತ್ ಸಿಸಿಬಿ ವಿಚಾರಣೆಗೆ ಆಗಮಿಸಿ ತಮ್ಮ ಹೇಳಿಕೆಯನ್ನ ದಾಖಲಿಸಿದ್ದಾರೆ.

ಇಂದು ರಾಜಕೀಯ ಮುಖಂಡನ ಪುತ್ರ ಆರ್.ವಿ.ಯುವರಾಜ್ ಹಾಜರು ಬೆನ್ನಲ್ಲೆ ಕೆಲ ರಾಜಕಾರಣಿಗಳ ಮಕ್ಕಳಿಗೆ ಢವ ಢವ ಶುರುವಾಗಿದೆ. ಸಿಸಿಬಿ ಪಟ್ಟಿಯಲ್ಲಿ ಹಲವು ರಾಜಕೀಯ ಮುಖಂಡರು ಮತ್ತು ಕುಟುಂಬಸ್ಥರ ಹೆಸರುಗಳಿವೆ ಎನ್ನಲಾಗಿದೆ. ಈ ಲಿಸ್ಟ್ ಕಳೆದ ವಾರ ಮುಚ್ಚಿದ ಲಕೋಟೆಯಲ್ಲಿ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಕೈ ಸೇರಿತ್ತು. ಮೊದಲ ಹಂತವಾಗಿ ಆರ್.ವಿ.ಯುವರಾಜ್ ಅವರನ್ನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ರಾಜಕಾರಿಣಿಗಳು ಮತ್ತು ಅವರ ಮಕ್ಕಳಿಗೆ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆಗಳು ದಟ್ಟವಾಗಿವೆ.

ಸಿಸಿಬಿ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ನಟ ಸಂತೋಷ್ ಕುಮಾರ್, ಆರೋಪಿ ವೈಭವ್ ಜೈನ್ ಗೆ ನನ್ನ ವಿಲ್ಲಾ ಬಾಡಿಗೆಗೆ ನೀಡಿದ್ದೆ. ಆದ್ರೆ ಇಬ್ಬರ ಮಧ್ಯೆ ಜಗಳ ಆಗಿದ್ದರಿಂದ ಆತನ ಜೊತೆಗಿನ ವ್ಯವಹಾರಗಳನ್ನು ರದ್ದು ಮಾಡಿಕೊಂಡಿದ್ದೇನೆ. ನಾಲ್ಕು ವರ್ಷಗಳ ಹಿಂದಿನ ಫೋಟೋಗಳು ವೈರಲ್ ಆಗಿವೆ. ವೈಭವ್ ಜೊತೆಗಿನ ವ್ಯವಹಾರದ ದಾಖಲೆಗಳ ಜೊತೆ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.

ಸಿಸಿಬಿ ನೋಟಿಸ್ ಹಿನ್ನೆಲೆ ಹೈದರಾಬಾದ್ ನಿಂದ ಬೆಂಗಳೂರಿಗೆ ಆಗಮಿಸಿರುವ ಅಕುಲ್ ಬಾಲಾಜಿ, ವಿಚಾರಣೆಗೆ ಕರೆದಿದ್ದು, ಹೀಗಾಗಿ ಹೇಳಿದ್ದ ಸಮಯಕ್ಕೆ ಬಂದಿದ್ದೇನೆ. ನನ್ನ ಕಡೆಯಿಂದ ಸಹಕಾರ ಇರುತ್ತೆ. ನಾನು ವೈಭವ್ ಜೈನ್ ಹಾಯ್ ಬಾಯ್ ಫ್ರೆಂಡ್ಸ್ ಅಷ್ಟೇ. ದೊಡ್ಡಬಳ್ಳಾಪುರದಲ್ಲಿ ರೆಸಾರ್ಟ್ ಕೊಟ್ಟಿರುವ ಬಗ್ಗೆ ನಾನು ದಾಖಲೆಗಳೊಂದಿಗೆ ಬಂದಿದ್ದೇನೆ. ಇದೊಂದು ಒಳ್ಳೆಯ ಕಾರ್ಯ, ಸಿಸಿಬಿಗೆ ನನ್ನ ಸಾಥ್ ಇದೆ. ವಿಚಾರಣೆಗೆ ನಾನು ಸ್ಪಂದಿಸಲಿದ್ದೇನೆ ಎಂದರು. ಪ್ರತೀಕ್ ಶೆಟ್ಟಿ ಪರಿಚಯವೇ ಎಂಬ ಪ್ರಶ್ನೆಗೆ ಆತ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟ ಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *