ಸ್ನೇಹಿತರ ಕೊಲೆ – 24 ಗಂಟೆಯಲ್ಲಿ ಡಬಲ್ ಮರ್ಡರ್ ಮಾಡಿದ್ದ ಆರೋಪಿಗಳು ಅಂದರ್

Public TV
1 Min Read

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇಬ್ಬರು ಯುವಕರ ಕೊಲೆ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಶ್ರೀನಿವಾಸ್ ಪರಶುರಾಮ ಹಿರೇಕುಂಬಿ (26) ಅವಿನಾಶ್ ಬಸವರಾಜ ನರಗುಂದ (29) ಸಂಜೀವ ರೇವಣಸಿದ್ದಪ್ಪ ವಡ್ಡರ (28) ಮತ್ತು ಮಧು ಕಲ್ಮೇಶ ಹಾದಿಮನಿ (25) ಬಂಧಿತ ಆರೋಪಿಗಳು. ಪ್ರಕರಣ ನಡೆದ 24 ಗಂಟೆಗಳಲ್ಲಿಯೇ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ನಿಯಾಜ್ ಜೋರಮ್ಮನವರ ಮತ್ತು ಈತನ ಗೆಳೆಯ ಮಂಜುನಾಥ ಕಬ್ಬಿನ್ ಇಬ್ಬರನ್ನು ನಾಲ್ವರು ಕಬ್ಬಿಣದ ರಾಡ್‍ನಿಂದ ಹೊಡೆದು ಹತ್ಯೆ ಮಾಡಿದ್ದರು. ಇದರಲ್ಲಿ ಪ್ರಮುಖ ಆರೋಪಿ ಶ್ರೀನಿವಾಸ್ ಅಲಿಯಾಸ್ ಸೀನು ನಿಯಾಜ್‍ನೊಂದಿಗೆ ಜಗಳವಾಡಿಕೊಂಡಿದ್ದ. ಅದೇ ಕಾರಣಕ್ಕೆ ಗೆಳೆಯರೊಂದಿಗೆ ಬಂದು ಹತ್ಯೆ ಮಾಡಿದ್ದಾನೆ.

ಸೀನುಗೆ ಸಾಥ್ ನೀಡಿದ ಮೂವರು ಸ್ನೇಹಿತರ ಬಂಧನವಾಗಿದೆ. ಮೃತ ಇಬ್ಬರು ಮತ್ತು ಆರೋಪಿಗಳು ಒಂದೇ ಪ್ರದೇಶದವರಾಗಿದ್ದು, ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.

ಹುಬ್ಬಳ್ಳಿ ಗೋಪನಕೊಪ್ಪ ಸಿದ್ರಾಮೇಶ್ವರನಗರ 3ನೇ ಕ್ರಾಸ್‍ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಂಜುನಾಥ ಕಬ್ಬಿನ್ ಹಾಗೂ ನಿಯಾಜ್ ಜೋರಮ್ಮನವರ ಇಬ್ಬರನ್ನು ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಶ್ವಾಪುರ ಠಾಣೆಯ ಪೊಲೀಸರು 24 ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *