– ಎರಡು ಗ್ರಾಮದಲ್ಲಿ ಈಗ ಪೊಲೀಸ್ ಬಂದೋಬಸ್ತ್
ಕೋಲಾರ : ಕ್ರಿಮಿನಲ್ ಹಿನ್ನೆಲೆ ಇರುವ ಸ್ನೇಹಿತರಿಬ್ಬರ ನಡುವೆ ಇದ್ದ ಹಳೆ ದ್ವೇಷ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ನಾಯಕರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ವೆಂಕಟರಾಮ ಆಲಿಯಾಸ್ ರೆಹಮತ್ ಎಂದು ಗುರುತಿಸಲಾಗಿದೆ. ಈತ ವೇಣುಗೋಪಾಲಪುರದ ನಿವಾಸಿಯಾಗಿದ್ದಾನೆ. ಆರೋಪಿಯನ್ನು ನಾಯಕರಹಳ್ಳಿ ಗ್ರಾಮದ ಅಶೋಕ್ ಎಂದು ಗುರುತಿಸಲಾಗಿದೆ. ಸ್ನೇಹಿತರಿಬ್ಬರ ನಡುವಿನ ಹಳೆ ವೈಷಮ್ಯ ಕೊಲೆಯಲ್ಲಿ ಅಂತ್ಯಕಂಡಿದೆ.
ಸಂಕ್ರಾಂತಿ ಹಬ್ಬ ದಂದು ನಾಯಕರಹಳ್ಳಿ ಗ್ರಾಮದ ಜನರು ಒಂದೆಡೆ ಸೇರಿ ಅಯ್ಯಪ್ಪ ಸ್ವಾಮಿಯ ಪೂಜೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಪಕ್ಕದೂರಿನ ವೇಣುಗೋಪಾಲಪುರದ ವೆಂಕಟರಾಮ ಆಲಿಯಾಸ್ ರೆಹಮತ್ ಕಾರ್ಯಕ್ರಮಕ್ಕೆ ಪೆಂಡಾಲ್ ಹಾಕಿದ್ದ. ಕಾರ್ಯಕ್ರಮ ಮುಗಿದ ನಂತರ ರಾತ್ರಿ-9 ಗಂಟೆ ಹೊತ್ತಿಗೆ ಪೆಂಡಾಲ್ ಬಿಚ್ಚಿಕೊಂಡು ಹೋಗಲು ಬಂದಿದ್ದನು.ರೆಹಮತ್ ಪೆಂಡಾಲ್ ಬಿಚ್ಚುತ್ತಿದ್ದ ವೇಳೆಯಲ್ಲಿ ನಾಯಕರಹಳ್ಳಿ ಗ್ರಾಮದ ಅಶೋಕ್ ಏಕಾಏಕಿ ಬಂದವನೇ ಕಬ್ಬಿಣದ ರಾಡ್‍ನಿಂದ ತಲೆಗೆ ಬರ್ಬರವಾಗಿ ಹೊಡೆದು ಕೊಂದು ಹಾಕಿದ್ದಾನೆ.
ಸ್ನೇಹಿತರಿಬ್ಬರ ನಡುವೆ ಹಳೆಯ ದ್ವೇಷವಿತ್ತು. ಈ ಕಾರಣ ದಿಂದಾಗಿ ಸಾಕಷ್ಟು ಬಾರಿ ಗಲಾಟೆಯು ಆಗಿತ್ತು. ಕೊಲೆಯಾದ ವೆಂಕಟರಾಮ ಕೂಡಾ ಹಿಂದೆ ಕೊಲೆ ಪ್ರಕರಣ, ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿ ರೌಡಿಶೀಟರ್ ಕೂಡಾ ಆಗಿದ್ದನು. ಆದರೆ ಇವರಿಬ್ಬರ ನಡುವಿನ ದ್ವೇಷ ಕೊಲೆಯಲ್ಲಿ ಅಂತ್ಯಕಂಡಿದೆ. ಕೊಲೆ ವಿಚಾರ ತಿಳಿದ ಸುಮಾರು 100 ಕ್ಕೂ ಹೆಚ್ಚು ಜನರು ನಾಯಕರಹಳ್ಳಿ ಗ್ರಾಮದ ಮೇಲೆ ದಾಳಿ ನಡೆಸಿದ್ದಾರೆ. ಕೊಲೆ ಮಾಡಿದ್ದ ಅಶೋಕ್ ಮನೆ ಸೇರಿ ಗ್ರಾಮದಲ್ಲಿ ಸಿಕ್ಕ ಸಿಕ್ಕ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ರಸ್ತೆಯಲ್ಲಿ ಸಿಕ್ಕ ಕಾರು, ಬೈಕ್‍ಗಳನ್ನು ಒಡೆದುಹಾಕಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ದಾಂದಲೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ದಾಂದಲೆ ನಡೆಸಿದ ಸುಮಾರು 20 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಎರಡೂ ಗ್ರಾಮಗಳಲ್ಲಿ ಬಿಗಿ ಪೊಲೀಸ್ ಕಾವಲು ಹಾಕಿದ್ದಾರೆ, ಪೆÇಲೀಸ್ ಬಂದೋಬಸ್ತ್‍ನಲ್ಲೇ ಕೊಲೆಯಾದ ವೆಂಕಟರಾಮನ ಅಂತ್ಯಸಂಸ್ಕಾರ ಮಾಡಿಸಿದ್ದಾರೆ.