ಸೋದರನ ಸಮಾಧಿ ಮಾಡಿದ ನಂತ್ರ ಪ್ರಿಯಕರನ ಸತ್ಯ ಬಿಚ್ಚಿಟ್ಟ ಅಪ್ರಾಪ್ತೆ

Public TV
1 Min Read

– ಒಟ್ಟಿಗೆ ಇದ್ದುದ್ದನ್ನ ನೋಡಿದ್ದಕ್ಕೆ 6 ವರ್ಷದ ಬಾಲಕನ ಕೊಲೆ

ಲಕ್ನೋ: ಆರು ವರ್ಷದ ಬಾಲಕನನ್ನು ತನ್ನ ಸಹೋದರಿಯ ಪ್ರಿಯತಮನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಮೊದಲಿಗೆ ಛಾವಣಿಯಿಂದ ಬಿದ್ದ ಮೃತಪಟ್ಟಿದ್ದಾನೆ ಎಂದು ಸಹೋದರಿ ಎಲ್ಲರಿಗೂ ಹೇಳಿ ನಂಬಿಸಿದ್ದಳು. ಆದರೆ ಆಕೆಗೆ ಅಪರಾಧದ ಭಾವನೆ ಕಾಡಿದ್ದರಿಂದ ಗುರುವಾರ ನಡೆದ ಘಟನೆಯ ಬಗ್ಗೆ ಪೋಷಕರಿಗೆ ಸತ್ಯ ಹೇಳಿದ್ದಾಳೆ. ಇದೀಗ ಪೊಲೀಸರು ಅಪ್ರಾಪ್ತೆಯನ್ನು ವಶಪಡಿಸಿಕೊಂಡಿದ್ದು, ಆರೋಪಿ ಗೆಳೆಯ ಪರಾರಿಯಾಗಿದ್ದಾನೆ.

ಏನಿದು ಪ್ರಕರಣ?
ಅಪ್ರಾಪ್ತ ಹುಡುಗಿಯ 21 ವರ್ಷದ ಪ್ರಿಯಕರ ಮಂಗಳವಾರ ಮಧ್ಯಾಹ್ನ ಆಕೆಯ ಮನೆಗೆ ಬಂದಿದ್ದಾನೆ. ಹುಡುಗಿಯ ಪೋಷಕರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರು ಕೆಲಸಕ್ಕೆ ಹೋಗಿದ್ದನು. ಈ ವೇಳೆ ಆರು ವರ್ಷದ ಬಾಲಕ ಮನೆಗೆ ಬಂದಿದ್ದಾನೆ. ಆಗ ಇಬ್ಬರು ಒಟ್ಟಿಗೆ ಇದ್ದುದ್ದನ್ನು ನೋಡಿದ್ದಾನೆ. ಇದರಿಂದ ತಮ್ಮಿಬ್ಬರ ಸಂಬಂಧವನ್ನು ಎಲ್ಲರ ಮುಂದೆ ಬಹಿರಂಗಪಡಿಸುತ್ತಾನೆ ಎಂಬ ಭಯದಿಂದ ಆರೋಪಿ ಪ್ರಿಯಕರ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಪೋಷಕರು ಮನೆಗೆ ವಾಪಸ್ ಬಂದಾಗ ಛಾವಣಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾನೆ ಎಂದು  ತಿಳಿಸಿದ್ದಾಳೆ. ತಕ್ಷಣ ಅವರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿಯೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಪೋಷಕರು ಬಾಲಕನ ಸಮಾಧಿ ಮಾಡಿದ್ದಾರೆ. ಇದರಿಂದ ಬಾಲಕನ ಸಹೋದರಿ ಖಿನ್ನತೆಗೆ ಒಳಗಾಗಿದ್ದಳು. ಕೊನೆಗೆ ಅಪರಾಧದ ಭಾವನೆಯಿಂದ ಗುರುವಾರ ಸಂಜೆ ನಡೆದ ಘಟನೆಯ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ ಎಂದು ಬರೇಲಿ ಎಸ್‍ಎಸ್‍ಪಿ ಶೈಲೇಶ್ ಪಾಂಡೆ ತಿಳಿಸಿದ್ದಾರೆ.

ಘಟನೆಯ ಬಗ್ಗೆ ತಿಳಿದ ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ತಂದೆ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗೆಳೆಯ ಪರಾರಿಯಾಗಿದ್ದು, ಅಪ್ರಾಪ್ತೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ನಂತರ ಅಪ್ರಾಪ್ತೆಯನ್ನು ಬಾಲಾಪರಾಧಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತದೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆ ನಡೆಸಲು ಮೃತ ಬಾಲಕನ ಶವವನ್ನು ಹೊರತೆಗೆಯಲು ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *