ಸೋಂಕು ನಿಯಂತ್ರಣ ಆಗದಿದ್ರೆ ಜಿಂದಾಲ್ ಲಾಕ್‍ಡೌನ್: ಸಚಿವ ಆನಂದ್ ಸಿಂಗ್

Public TV
2 Min Read

-ಇತ್ತ ಅನಗತ್ಯ ತೊಂದ್ರೆ ಕೊಡ್ಬೇಡಿ ಎಂದು ಸಿಎಂಗೆ ಪತ್ರ

ಬಳ್ಳಾರಿ: ಕೊರೊನಾ ಸೋಂಕು ನಿಯಂತ್ರಣ ಆಗದಿದ್ದರೆ ಜಿಂದಾಲ್ ಕಾರ್ಖಾನೆಯನ್ನು ಲಾಕ್‍ಡೌನ್ ಮಾಡಲಾಗುವುದು ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ರಾಜ್ಯದ ಪ್ರತಿಷ್ಠಿತ ಉಕ್ಕು ಕಾರ್ಖಾನೆ ಬಳ್ಳಾರಿಯ ಜಿಂದಾಲ್‍ನಲ್ಲಿ ಸೋಂಕು ತನ್ನ ಅಟ್ಟಹಾಸ ಮುಂದುವರಿಸಿದೆ. ಈ ಬಗ್ಗೆ ಇಂದು ಜಿಂದಾಲ್ ಮುಖ್ಯಸ್ಥ ವಿನೋದ್ ನಾವೆಲ್, ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಬಳಿಕ ಮಾತನಾಡಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಂದಾಲ್ ಹೇಗೆ ಕೆಲಸ ಮಾಡುತ್ತೆ ಎಂಬುದು ಎಲ್ಲರಿಗೂ ಗೊತ್ತು. ನಾನು ವೈಯಕ್ತಿಕವಾಗಿ ಜಿಂದಾಲ್ ಬಗ್ಗೆ ಮೃಧು ಧೋರಣೆ ತೋರಲ್ಲ. ಈ ಹಿಂದೆ ರಾಜೀನಾಮೆ ಯಾಕೇ ನೀಡಿರುವೆ ಎಂಬುದು ಎಲ್ಲರಿಗೂ ಗೊತ್ತು ಎಂದು ಮತ್ತೆ ಜಿಂದಾಲ್ ವಿರುದ್ಧ ಗುಡುಗಿದ್ದಾರೆ.

ಒಂದು ವೇಳೆ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಜಿಂದಾಲ್ ಪಾಲನೆ ಮಾಡದಿದ್ರೆ, ಜಿಂದಾಲ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ನಾನು ಸಿದ್ದ. ನಾನು ಯಾವುದೇ ಸರ್ಕಾರದ ಪರವಾಗಿಲ್ಲ. ನಾನು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಅನಗತ್ಯ ತೊಂದರೆ ಕೊಡ್ಬೇಡಿ: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಜಿಲ್ಲೆಯ ಕೈಗಾರಿಕೆಗಳ ಸದ್ಯದ ಸ್ಥಿತಿಗತಿಗಳ ಬಗ್ಗೆ ಪತ್ರ ಬರೆದಿದ್ದು, ಈ ಮನವಿ ಪತ್ರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೂ ಸಹ ಕಳುಹಿಸಿಕೊಡಲಾಗಿದೆ. ಈ ಮನವಿ ಪತ್ರದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ವಿ.ರವಿಕುಮಾರ ಅವರು ಜೆಎಸ್ ಡಬ್ಲ್ಯೂ ಸಂಸ್ಥೆಗೆ ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆಂದು ವಿವರಿಸಿದ್ದಾರೆ.

ಜೆಎಸ್ ಡಬ್ಲ್ಯೂ ಕೇವಲ ತನ್ನ ವ್ಯಾಪಾರ ವಹಿವಾಟಿನ ಕಡೆಗೆ ಗಮನ ಹರಿಸದೆ ತನ್ನ ಸುತ್ತಮುತ್ತಲಿನ ಪರಿಸರವನ್ನು ಹಸಿರು ಮಯವಾಗಿ ಕಾಯ್ದುಕೊಂಡಿದೆ. ನೆರೆ ಹೊರೆಯ ಗ್ರಾಮಗಳನ್ನು ದತ್ತು ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿ, ಶಾಲಾ ಕಾಲೇಜುಗಳ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ತರಬೇತಿ, ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ. ಜಿಲ್ಲೆಯ ನಾಗರೀಕರ ಆರೋಗ್ಯಕ್ಕಾಗಿ ಸಂಜೀವಿನಿ ಆಸ್ಪತ್ರೆಯ ಸೇವೆಯನ್ನು ಒದಗಿಸುತ್ತಿದೆ ಎಂದು ಪತ್ರದಲ್ಲಿ ರವಿಕುಮಾರ್ ಹೇಳಿದ್ದಾರೆ.

ಜೆಎಸ್ ಡಬ್ಲ್ಯು ಸಂಸ್ಥೆಯನ್ನು ಕೋವಿಡ್-19 ರ ಕಾರಣದಿಂದಾಗಿ ಸ್ಥಗಿತಗೊಳಿಸಬೇಕು ಎಂದು ಇತ್ತೀಚೆಗೆ ಕೇಳಿ ಬರುತ್ತಿರುವ ಕೂಗು ತುಂಬಾ ಶೋಚನೀಯವಾಗಿದೆ. ಸಮಾಜಮುಖಿ ಕೆಲಸ, ಆಳ್ವಿಕೆ ಸರ್ಕಾರಗಳಿಗೆ ಆರ್ಥಿಕ ಶಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಹೀಗೆ ಹತ್ತು ಹಲವು ಸೇವೆಯಿಂದ ಗುರುತಿಕೊಂಡಿರುವ ಈ ಬೃಹತ್ ಕೈಗಾರಿಕೆಯನ್ನು ಸ್ಥಗಿತಗೊಳಿಸಿದರೆ ಇದರಿಂದಾಗಿ ಈ ಮೇಲ್ಕಾಣಿಸಿದ ಎಲ್ಲ ಜವಾಬ್ದಾರಿಯುತ ಕೆಲಸಗಳನ್ನು ಮಾಡುವವರು ಯಾರು ಎಂದು ರವಿಕುಮಾರ ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಜೆಎಸ್ ಡಬ್ಲ್ಯು ಕಾರ್ಖಾನೆಯು ಕೊರೆಕ್ಸ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಯಾಗಿದ್ದು, ಒಂದು ಬಾರಿ ಫರ್ನೇಸ್ ಅನ್ನು ಬಂದ್ ಮಾಡಿದರೆ ಪುನಃ ಪ್ರಾರಂಭಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಜೆಎಸ್ ಡಬ್ಲ್ಯು ಕಾರ್ಖಾನೆಯನ್ನು ಬಂದ್ ಮಾಡುವುದರ ಬದಲಾಗಿ ಇನ್ನು ಹೆಚ್ಚಿನ ಸುರಕ್ಷತಾ ಕ್ರಮದೊಂದಿಗೆ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಜೆಎಸ್ ಡಬ್ಲ್ಯು ಕಾರ್ಖಾನೆಯನ್ನು ಬಂದ್ ಮಾಡುವ ನಿರ್ಧಾರಕ್ಕೆ ನಮ್ಮ ಸಂಸ್ಥೆಯ ತೀವ್ರ ವಿರೋಧ ಇದೆ ಎಂದು ರವಿಕುಮಾರ ಪತ್ರದಲ್ಲಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *