ಸೋಂಕಿತರ ಚಿಕಿತ್ಸೆಗೆ ಪ್ಲಾಸ್ಮಾ ದಾನ ಮಾಡಿ: ಸಿದ್ದರಾಮಯ್ಯ ಮನವಿ

Public TV
1 Min Read

ಬೆಂಗಳೂರು: ಕೊರೊನಾ ವೈರಸ್ ನಿಂದ ಗುಣಮುಖರಾದವರು ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡುವ ಮೂಲಕ ಸಹಾಯ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೊರೊನಾ ಸೋಂಕಿನಿಂದ ಗುಣಮುಖರಾದವರು ತಮ್ಮ ರಕ್ತದಲ್ಲಿನ ಪ್ಲಾಸ್ಮಾವನ್ನು ಬೇರೆ ಸೋಂಕಿತರ ಚಿಕಿತ್ಸೆಗಾಗಿ ದಾನ ಮಾಡಬೇಕೆಂದು ಕೋರುತ್ತಿದ್ದೇನೆ. ನಿಮ್ಮ ಆರೋಗ್ಯ ರಕ್ಷಣೆಗಾಗಿ ನೂರಾರು ಮಂದಿ ಶ್ರಮಿಸಿದ್ದಾರೆ. ಈಗ ನೀವು ಅವರೆಲ್ಲರ ಋಣ ತೀರಿಸುವ ಕರ್ತವ್ಯವನ್ನು ನಿಭಾಯಿಸಬೇಕಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಟ್ವೀಟ್ ಮಾಡಿರುವ ಅವರು, ವೈದ್ಯರಲ್ಲಿ ದೇವರನ್ನು ಕಾಣುವ ಪರಂಪರೆ ನಮ್ಮದು. ಕೊರೊನಾಮಯ ದುರಿತ ಕಾಲದಲ್ಲಿಯೂ ಈ ವೈದ್ಯರು ಪ್ರಾಣ ಭಯ ಇಲ್ಲದೆ ನಿಸ್ವಾರ್ಥವಾಗಿ ನಮ್ಮ ಸೇವೆ ಮಾಡುತ್ತಿದ್ದಾರೆ. ಈ ವೈದ್ಯರು ಮತ್ತೆಲ್ಲ ಆರೋಗ್ಯಸೇವಾ ಕಾರ್ಯಕರ್ತರ ಆರೋಗ್ಯಕ್ಕಾಗಿ ಪ್ರಾರ್ಥಿಸೋಣ. ವೈದ್ಯ ಮಿತ್ರರಿಗೆ ವೈದ್ಯರ ದಿನಾಚರಣೆಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಪ್ಲಾಸ್ಮಾ ಥೆರಪಿ ಎಂದರೇನು?
ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.

ಸೋಂಕು ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು. ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡ ದಾನ ಮಾಡಬಹುದಾಗಿದೆ. ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *