ಸೋಂಕಿತನ ಹೆಸರು ಬಹಿರಂಗ- ಅಧಿಕಾರಿಗಳ ವಿರುದ್ಧ ದೂರು

Public TV
2 Min Read

ಮಡಿಕೇರಿ: ಕೊರೊನಾ ಮಹಾಮಾರಿ ಹೆಸರು ಕೇಳಿದರೆ ಸಾಕು ಜನರು ಬೆಚ್ಚಿ ಬೀಳುತ್ತಿದ್ದು, ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಕೊರೊನಾ ಸೋಂಕಿತ ವ್ಯಕ್ತಿ ನೋಡುವ ಭಾವನೆ ಭಿನ್ನವಾಗುತ್ತಿಲ್ಲ. ಈ ಕಾರಣದಿಂದಲೇ ಸರ್ಕಾರ ಕೂಡ ಸೋಂಕಿತನ ಹೆಸರು ಬಹಿರಂಗ ಮಾಡುವುದಿಲ್ಲ. ಆದರೆ ಹೊರದೇಶದಿಂದ ಕೊಡಗಿಗೆ ಬಂದ ಸೋಂಕಿತರ ಹೆಸರನ್ನು ಅಧಿಕಾರಿಗಳೇ ಬಹಿರಂಗಗೊಳಿಸುವ ಮೂಲಕ ಎಡವಟ್ಟು ಮಾಡಿದ್ದಾರೆ.

ಕೊರೊನಾ ಮಹಾಮಾರಿ ತನ್ನ ಕಬಂಧಬಾಹುಗಳನ್ನು ವಿಸ್ತಾರ ಮಾಡುತ್ತಲೇ ಇದ್ದು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಪಾಲಿಗಂತೂ ಭಯಾನಕವಾಗಿ ಪರಿಣಮಿಸುತ್ತಿದೆ. ಈಗಾಗಿ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು ಜನರು ಕಳಂಕಿತನಾಗಿ ನೋಡುತ್ತಿದ್ದಾರೆ. ಆದ್ದರಿಂದಲೇ ಸರ್ಕಾರ ಸೋಂಕಿತನ ಹೆಸರನ್ನು ಬಹಿರಂಗಗೊಳಿಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದೆ. ಆದರೆ ವಿದೇಶದಿಂದ ಬಂದ ವ್ಯಕ್ತಿಯೊಬ್ಬರು ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ, ಮಡಿಕೇರಿ ತಾಲೂಕಿನ ನಾಪೋಕ್ಲಿಗೆ ಬಂದಿದ್ದರು. ನಾಪೋಕ್ಲಿನ ತಮ್ಮ ಮನೆಯಲ್ಲಿರಬೇಕಾದ ವ್ಯಕ್ತಿ ವಿರಾಜಪೇಟೆ ಪಟ್ಟಣದ ಮೀನುಪೇಟೆಯಲ್ಲಿದಿದ್ದರು. ವಿಷಯ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಆತನ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷಿಸಿದಾಗ ವ್ಯಕ್ತಿಗೆ ಪಾಸಿಟಿವ್ ಇರುವುದು ದೃಢವಾಗಿತ್ತು. ಇದರಿಂದ ವಿರಾಜಪೇಟೆ ಪಟ್ಟಣದ ಮೀನುಪೇಟೆಯನ್ನು ನಿಷೇಧಿತ ಪ್ರದೇಶವೆಂದು ಮಾಡಿದ್ದಾರೆ.

ಅಲ್ಲದೇ ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವ್ಯಕ್ತಿಯ ವಿರುದ್ಧ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಅಡಿ ಅಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ದೂರು ನೀಡುವಾಗ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಿದ್ದಾರೆ. ಇದರಿಂದ ಸೋಂಕಿತ ವ್ಯಕ್ತಿಯ ಸ್ನೇಹಿತರು, ಸಂಬಂಧಿಕರು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧವೇ ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ವಿರಾಜಪೇಟೆ ತಾಲೂಕು ಅಧಿಕಾರಿ, ಹೌದು ಹೆಸರು ಬಹಿರಂಗಪಡಿಸಬಾರದಿತ್ತು. ಇದು ಸ್ಥಳೀಯ ಆಡಳಿತದಿಂದ ತಪ್ಪಾಗಿದ್ದು, ಇನ್ಮುಂದೆ ಇಂತಹ ತಪ್ಪಾಗದಂತೆ ಸೂಚನೆ ನೀಡಲಾಗಿದೆ. ತಪ್ಪು ಮಾಡಿರುವುದಕ್ಕೆ ಶಿಕ್ಷೆಯೂ ಆಗಲಿದೆ ಎಂದು ತಿಳಿಸಿದರು.

ಸೋಂಕಿತ ವ್ಯಕ್ತಿ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸುವಾಗ ಮಡಿಕೇರಿ ತಾಲೂಕಿನ ನಾಪೋಕ್ಲಿನ ವಿಳಾಸ ನೀಡಿದ್ದು, ಬಳಿಕ ವಿರಾಜಪೇಟೆ ಪಟ್ಟಣಕ್ಕೆ ಬಂದು ನೆಲೆಸಿ ತಪ್ಪು ಮಾಡಿದ್ದಾನೆ. ಅಲ್ಲದೇ ವಿದೇಶದಿಂದ ಆಗಮಿಸಿದ್ದ ಆತ ಕೇರಳದಿಂದ ಬಂದಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದ. ಇಂಥವರಿಂದಾಗಿ ಬೇರೆ ವ್ಯಕ್ತಿಗಳಿಗೆ ಹರಡಿದರೆ ಯಾರು ಜವಾಬ್ದಾರಿ. ಇದರಿಂದ ಬೇರೆಯವರಿಗೂ ತಕ್ಕ ಪಾಠವಾಗಬೇಕು ಎನ್ನುವ ಉದ್ದೇಶದಿಂದ ಅಧಿಕಾರಿಗಳು ದೂರು ನೀಡಿದ್ದಾರೆ ಎಂದು ವಿರಾಜಪೇಟೆ ತಹಶೀಲ್ದಾರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *