ಸೋಂಕಿತನ ಜೇಬಿನಿಂದ ನಗದು ಕದ್ದು ಸಿಕ್ಕಿಬಿದ್ದ ಕೋವಿಡ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿ

Public TV
2 Min Read

ಮಡಿಕೇರಿ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಜೇಬಿನಿಂದ 11 ಸಾವಿರ ರೂ. ನಗದನ್ನು ಕಳವು ಮಾಡಿದ್ದ ಆಸ್ಪತ್ರೆಯ ತಾತ್ಕಾಲಿಕ ಡಿ ಗ್ರೂಪ್ ಸಿಬ್ಬಂದಿಯನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋವಿಡ್ ಆಸ್ಪತ್ರೆಯಲ್ಲಿ ಕಳೆದ 17 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಡಿಕೇರಿ ತಾಲೂಕಿನ ಜೋಡುಪಾಲ ನಿವಾಸಿ ದಿಲ್‍ಶಾದ್(45) ಬಂಧಿತ ಆರೋಪಿಯಾಗಿದ್ದಾಳೆ. ಇದನ್ನೂ ಓದಿ: ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲಿಗೆ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮದ ರಜನಿಕಾಂತ್ ಎಂಬವರು ಉಸಿರಾಟದ ಸಮಸ್ಯೆಯಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೆಡ್‍ಗಳ ಕೊರತೆ ಎದುರಾಗಿರುವುದರಿಂದ ಇಲ್ಲಿಯೂ ಆ ರೀತಿ ಏನಾದರೂ ಸಮಸ್ಯೆ ಆಗಬಹುದೆಂಬ ಅನುಮಾನದಿಂದ ಸೋಂಕಿತ ರಜನಿಕಾಂತ್‍ಗೆ ಅವರ ಕುಟುಂಬಸ್ಥರು 11 ಸಾವಿರ ರೂಪಾಯಿ ಹಣ ಕೊಟ್ಟು ಕಳುಹಿಸಿದ್ದರು.

ದಿನ ಕಳೆದಂತೆ ರಜನಿಕಾಂತ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗತೊಡಗಿತು. ಬಳಿಕ ಅವರನ್ನು ಐಸಿಯು ವಾರ್ಡ್‍ಗೆ ಸ್ಥಳಾಂತರ ಮಾಡಲಾಗಿತ್ತು. ಮೇ 20 ರಂದು ಬೆಳಗ್ಗೆ 5.30 ಗಂಟೆಗೆ ರಜನಿಕಾಂತ್ ತಮ್ಮ ಪತ್ನಿ ಶೋಭಾ ಅವರಿಗೆ ಕರೆ ಮಾಡಿ, ಬೆಳಗ್ಗೆ 4 ಗಂಟೆಗೆ ಡೈಪರ್ ಪ್ಯಾಡ್ ಬದಲಾಯಿಸಲು ಬಂದ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು ತನ್ನ ಜೇಬಿನಲ್ಲಿದ್ದ 11 ಸಾವಿರ ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು. ಬಳಿಕ ಮೇ 23ರಂದು ರಜನಿಕಾಂತ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಇದನ್ನೂ ಓದಿ:  ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಮೃತರ ಮೊಬೈಲ್ ಕದ್ದ ಆರೋಪಿ ಬಂಧನ 

ರಜನಿಕಾಂತ್ ಅವರ ಜೇಬಿನಿಂದ ತೆಗೆಯಲಾಗಿದ್ದ ಹಣವನ್ನು ಇದುವರೆಗೂ ಯಾರೂ ಕೂಡ ಹಿಂದಿರುಗಿಸಿರಲಿಲ್ಲ. ರಜಿನಿಕಾಂತ್ ಅವರ ಪತ್ನಿ ಶೋಭಾ ಅವರು ಕೂಡ ಹೋಂ ಕ್ವಾರಂಟೈನ್‍ನಲ್ಲಿರುವ ಕಾರಣದಿಂದ ಶೋಭಾ ಅವರ ಸಹೋದರ ಕೆ.ಗಿರೀಶ್ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ಈ ದೂರನ್ನು ದಾಖಲಿಸಿಕೊಂಡ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಸಿ.ಸಿ. ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ದಿಲ್‍ಶಾದ್ ಎಂಬಾಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. ಈ ಸಂದರ್ಭ ಹಣ ಕಳವು ಮಾಡಿರುವ ಕುರಿತು ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *