ಸೆಪ್ಟೆಂಬರ್ 7 ರಿಂದ ಮೆಟ್ರೋ ಸಂಚಾರ ಪುನಾರಂಭ-ಕೇಂದ್ರದಿಂದ ಮಾರ್ಗಸೂಚಿ

Public TV
2 Min Read

ನವದೆಹಲಿ: ನಾಲ್ಕನೇ ಹಂತದ ಅನ್‍ಲಾಕ್ ನಲ್ಲಿ ಸೆಪ್ಟೆಂಬರ್ 7 ರಿಂದ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಏಳು ತಿಂಗಳ ಬಳಿಕ ಲೈನ್ ಗಳನ್ನು ಆಧರಿಸಿ ಹಲವು ಹಂತಗಳಲ್ಲಿ ಸಂಚಾರ ಪುನಾರಂಭಗೊಳ್ಳಲಿದ್ದು ಇದಕ್ಕಾಗಿ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ ಏಳರಿಂದ ಮೊದಲ ಹಂತದಲ್ಲಿ ಬೆಂಗಳೂರು, ಚೆನೈ, ನೊಯ್ಡಾ, ಕೊಚ್ಚಿ, ಮುಂಬೈನಲ್ಲಿ ಮೆಟ್ರೋ ಸಂಚಾರ ಪುನಾರಂಭಗೊಳ್ಳಲಿದೆ. ಲೈನ್ ಗಳನ್ನು ಆಧರಿಸಿ ಎರಡು ಅಥವಾ ಮೂರು ಹಂತಗಳಲ್ಲಿ ಮೆಟ್ರೋ ಕಾರ್ಯರಂಭ ಮಾಡಲು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ. ಸೆಪ್ಟೆಂಬರ್ 12 ರೊಳಗೆ ಪೂರ್ಣ ಪ್ರಮಾಣ ಸೇವೆ ನೀಡಲು ಸೂಚನೆ ನೀಡಿದೆ. ಮೆಟ್ರೋ ಪ್ರಯಾಣ ಪುನಾರಂಭ ಹಿನ್ನೆಲೆ ಪ್ರಯಾಣಿಕರು ಮತ್ತು ಮೆಟ್ರೋ ನಿಗಮ ಮಂಡಳಿಗೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮಾರ್ಗಸೂಚಿಗಳು:
* ಕಂಟೈನ್‍ಮೆಂಟ್ ಝೋನ್‍ಗಳ ನಿಲ್ದಾಣಗಳಲ್ಲಿ ಮೆಟ್ರೋ ನಿಲುಗಡೆ ಇಲ್ಲ, ಅಲ್ಲಿರುವ ನಿಲ್ದಾಣ ಬಂದ್ ಮಾಡಬೇಕು.
* ಸಾಮಾಜಿಕ ಅಂತರ ಗುರುತಿಸಲು ನಿಲ್ದಾಣದ ಎಲ್ಲ ಭಾಗದಲ್ಲಿ ಗುರುತುಗಳನ್ನು ಮಾಡಬೇಕು.
* ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯ.
* ಮಾಸ್ಕ್ ಇಲ್ಲದೇ ಬರುವ ವ್ಯಕ್ತಿಗಳ ಬಳಿ ಹಣ ಪಡೆದುಕೊಂಡು ಮಾಸ್ಕ್ ಪೂರೈಸಬಹುದು.
* ನಿಲ್ದಾಣಗಳಿಗೆ ಪ್ರವೇಶಿಸುವ ವ್ಯಕ್ತಿಗಳ ಉಷ್ಣ ತಪಾಸಣೆ ನಡೆಸಬೇಕು. ರೋಗಲಕ್ಷಣವಿಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಬೇಕು.
* ರೋಗಲಕ್ಷಣವಿರುವ ವ್ಯಕ್ತಿಗಳಿಗೆ ಪರೀಕ್ಷೆ ಅಥವಾ ವೈದ್ಯಕೀಯ ತಪಾಸನೆಗಾಗಿ ಹತ್ತಿರದ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ಹೋಗಲು ಸೂಚಿಸಬೇಕು.
* ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆಯನ್ನು ಪ್ರೋತ್ಸಾಹಿಸಬೇಕು.
* ಪ್ರಯಾಣಿಕರಿಗೆ ಬರುವಾಗ ಸ್ಯಾನಿಟೈಸರ್ ಒದಗಿಸಬೇಕು. ರೈಲು ಮತ್ತು ನಿಲ್ದಾಣಗಳು ಮತ್ತು ನಿಲ್ದಾಣ ಒಳಗಿರುವ ಎಲ್ಲ ಉಪಕರಣಗಳು, ಲಿಫ್ಟ್, ಎಸ್ಕಲೇಟರ್ ಗಳು ಮತ್ತು ಶೌಚಾಲಯಗಳನ್ನು ಸ್ಯಾನಿಟೈಸ್ ಮಾಡಬೇಕು.
* ಸ್ಮಾರ್ಟ್ ಕಾರ್ಡ್ ಬಳಕೆ ಮತ್ತು ನಗದು ರಹಿತ ಆನ್‍ಲೈನ್ ವಹಿವಾಟುಗಳನ್ನು ಪ್ರೋತ್ಸಾಹಿಸಬೇಕು. ಸರಿಯಾಗಿ ಶುಚಿಗೊಳಿಸಿದ ಟೋಕನ್‍ಗಳು ಮತ್ತು ಚೀಟಿಗಳನ್ನು ಬಳಸಬೇಕು.
* ಮೆಟ್ರೋದಲ್ಲಿರುವ ಡಿಜಿಟಲ್ ಮಾಧ್ಯಮದ ಮೂಲಕ ಜಾಗೃತಿ ಮೂಡಿಸಬೇಕು.

ಇದಲ್ಲದೇ ಜನದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲ ನಿಲ್ದಾಣಗಳಲ್ಲಿ ರೈಲು ನಿಲುಗಡೆಯನ್ನು ತಪ್ಪಿಸುವ ನಿರ್ಧಾರಗಳನ್ನು ಮೆಟ್ರೋ  ರೈಲು ನಿಗಮಗಳು ಕೈಗೊಳ್ಳಬಹುದು. ನಿಲ್ದಾಣದ ಹೊರಗಿನ ಜನಸಂದಣಿ ನಿಯಂತ್ರಿಸಲು ಮತ್ತು ತುರ್ತು ಪರಿಸ್ಥಿತಿ ಎದುರಿಸಲು ರಾಜ್ಯ ಪೊಲೀಸ್ ಮತ್ತು ಸ್ಥಳೀಯ ಆಡಳಿತದೊಂದಿಗೆ ಮೆಟ್ರೋ ರೈಲು ನಿಗಮಗಳು ನಿಕಟ ಸಂಪರ್ಕ ಹೊಂದಿರಬೇಕು ಎಂದು ಮೆಟ್ರೋ ನಿಗಮ ಮಂಡಳಿಗಳಿಗೆ ಸೂಚಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕೆ ಮೆಟ್ರೋ ಪುನಾರಂಭ ಮಾಡಿದ್ದು ಸಾಕಷ್ಟು ಎಚ್ಚರಿಯನ್ನು ವಹಿಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *