ಸುಶಾಂತ್ ಪ್ರಕರಣ – ಮಹೇಶ್ ಭಟ್, ಕರಣ್ ಜೋಹರ್‌ ಮ್ಯಾನೇಜರ್‌ಗೆ ಸಮನ್ಸ್

Public TV
2 Min Read

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಮಹೇಶ್ ಭಟ್ ಮತ್ತು ಕರಣ್ ಜೋಹರ್‌ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯಲ್ಲಿ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮತ್ತು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ. ಇತ್ತೀಚೆಗೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮತ್ತು ನಟಿ ಕಂಗನಾ ರಣಾವತ್‍ಗೂ ಕೂಡ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದರು.

ಈ ವಿಚಾರವಾಗಿ ಮಾತನಾಡಿರುವ ಅನಿಲ್ ದೇಶ್ಮುಖ್, ನಾಳೆ ಮಹೇಶ್ ಭಟ್ ಅವರನ್ನು ವಿಚಾರಣೆಗೆ ಕರೆಯಲಾಗುವುದು ಮತ್ತು ನಂತರ ನಾವು ಕರಣ್ ಜೋಹರ್ ಅವರ ವ್ಯವಸ್ಥಾಪಕರನ್ನು ಸಹ ಕರೆಯುತ್ತೇವೆ. ಅಗತ್ಯವಿದ್ದರೆ ಕರಣ್ ಜೋಹರ್ ಅವರನ್ನು ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ವಿಚಾರಣೆಗೆ ಕರೆಯಬಹುದು. ಜೊತೆಗೆ ಧರ್ಮ ಪ್ರೊಡಕ್ಷನ್ಸ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವಾ ಮೆಹ್ತಾ ಅವರನ್ನು ವಿಚಾರಣೆ ಮಾಡಬಹುದು ಎಂದು ಹೇಳಿದ್ದಾರೆ.

ಇತ್ತೀಚೆಗೆ ಸುಶಾಂತ್ ಸಿಂಗ್ ಅವರ ಪ್ರೇಯಸಿ ರಿಯಾ ಚಕ್ರವರ್ತಿ, ಸುಶಾಂತ್ ಅವರ ಆಹ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನೀಡಬೇಕು. ಈ ಪ್ರಕರಣ ಯಾವುದೇ ಲೋಪದೋಷವಿಲ್ಲದೇ ತನಿಖೆ ಆಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಬೇಡಿಕೆ ಇಟ್ಟಿದ್ದರು. ಇದಾದ ಬಳಿಕ ಈ ವಿಚಾರವಾಗಿ ಮಾತನಾಡಿದ್ದ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್, ಸುಶಾಂತ್ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ನಮ್ಮ ಮುಂಬೈ ಪೊಲೀಸರೇ ತನಿಖೆ ಮಾಡುತ್ತಾರೆ ಎಂದು ಹೇಳಿದ್ದರು.

ಸುಶಾಂತ್ ಸಿಂಗ್ ಅವರ ಆತ್ಮಹತ್ಯೆ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಸುಶಾಂತ್ ಬಾಲಿವುಡ್‍ನಲ್ಲಿರುವ ಸ್ವಜನಪಕ್ಷಪಾತಕ್ಕೆ ಬಲಿಯಾಗಿದ್ದರೆ ಎಂದು ನೆಟ್ಟಿಗರು ಕೆಲ ಸ್ಟಾರ್ ಗಳನ್ನು ಮತ್ತು ಸ್ಟಾರ್ ಮಕ್ಕಳನ್ನು ಟ್ರೋಲ್ ಮಾಡಿದ್ದರು. ಇದರ ಜೊತೆಗೆ ನಟಿ ಕಂಗನಾ ರಣಾವತ್ ಕೂಡ ಬಾಲಿವುಡ್‍ನಲ್ಲಿರುವ ಮೂವಿ ಮಾಫಿಯಾಗೆ ಸುಶಾಂತ್ ಸಿಂಗ್ ಬಲಿಯಾಗಿದ್ದಾರೆ. ಬಾಲಿವುಡ್ ಸುಶಾಂತ್ ಅವರನ್ನು ಪ್ಲಾನ್ ಮಾಡಿ ಮರ್ಡರ್ ಮಾಡಿದೆ ಎಂದು ಆರೋಪಿಸಿದ್ದರು. ಇದಾದ ನಂತರ ಮುಂಬೈ ಪೊಲೀಸರು ಕಂಗನಾಗೂ ಸಮನ್ಸ್ ನೀಡಿದ್ದರು.

ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಮುಂಬೈ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಆತ್ಮಹತ್ಯೆ ನಂತರ ಅವರ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಈ ನಡುವೆ ನಟಿ ಕಂಗನಾ ರಣಾವತ್ ಅವರು ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ಅದೊಂದು ಯೋಜಿತ ಕೊಲೆ ಎಂದು ಆರೋಪ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *