‘ಸುಳ್ಳು ನೆಪ ಹೇಳಿಕೊಂಡು ರಸ್ತೆಗೆ ಬರುವುದು ಇನ್ಮುಂದೆ ನಡೆಯಲ್ಲ’ – ಬೆಂಗ್ಳೂರಿಗರಿಗೆ ಆಯುಕ್ತರಿಂದ ವಾರ್ನಿಂಗ್

Public TV
2 Min Read

– 12 ಗಂಟೆಯ ನಂತ್ರ ಸಂಪೂರ್ಣ ಕ್ಲೋಸ್
– ಪೊಲೀಸರು ಜೊತೆ ಗಲಾಟೆ ಮಾಡಿದ್ರೆ ಕ್ರಮ
– ವಾಹನ ಜಪ್ತಿ, ಮಾಲೀಕರ ಮೇಲೆ ಕೇಸ್

ಬೆಂಗಳುರು: ಇಂದಿನಿಂದ ಒಂದು ವಾರಗಳ ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್‍ಡೌನ್ ಆಗಿದೆ. ಇಂದು ಲಾಕ್‍ಡೌನ್ ಮೊದಲ ದಿನದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಬೆಳ್ಳಂಬೆಳಗ್ಗೆ ಸಿಟಿ ರೌಂಡ್ಸ್ ಹಾಕಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಭಾಸ್ಕರ್ ರಾವ್, ಇಷ್ಟು ದೊಡ್ಡ ನಗರವನ್ನು ಲಾಕ್‍ಡೌನ್ ಮಾಡುವುದು ಎಂದರೆ ಸಾಧ್ಯವಿಲ್ಲ. ಇದು ಸಾರ್ವಜನಿಕರ ಸಹಕಾರದಿಂದ ಮಾಡಲು ಸಾಧ್ಯ. ಈಗಾಗಲೇ ಜನರಿಗೆ ಈ ಕೊರೊನಾ ಬಗ್ಗೆ ಗೊತ್ತಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮತ್ತೆ ಒಂದು ವಾರ ಲಾಕ್‍ಡೌನ್ ಮಾಡಿದೆ. ಆದ್ದರಿಂದ ಅದನ್ನು ಯಶಸ್ವಿ ಮಾಡುವುದು ಪೊಲೀಸರ ಜವಾಬ್ದಾರಿಯಾಗಿದೆ ಎಂದರು.

ಕರ್ತವ್ಯದಲ್ಲಿರುವ ಪೊಲೀಸರು ಜೊತೆ ಗಲಾಟೆ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ನಾವು ಸುಮ್ಮಸುಮ್ಮನೆ ರಸ್ತೆಯಲ್ಲಿ ಬಂದು ನಿಂತಿಲ್ಲ. ನಿಮ್ಮ ಸುರಕ್ಷತೆಗಾಗಿ ನಾವು ಬಂದು ನಿಂತಿರುವುದು. ಅನಾವಶ್ಯಕವಾಗಿ ರೋಡಿಗಿಳಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಾಕರ್ಸ್ ಕೂಡ ಮನೆಯ ಅಕ್ಕಪಕ್ಕದಲ್ಲೇ ವಾಕ್ ಮಾಡಬೇಕು. ಸುಳ್ಳು ನೆಪಗಳು ಹೇಳಿಕೊಂಡು ರಸ್ತೆಗೆ ಬರುವುದು ಇನ್ಮುಂದೆ ನಡೆಯಲ್ಲ ಎಂದು ಭಾಸ್ಕರ್ ರಾವ್ ಎಚ್ಚರಿಕೆ ನೀಡಿದರು.

12 ಗಂಟೆಯೊಳಗೆ ಅಗತ್ಯ ವಸ್ತುಗಳ ಖರೀದಿ ಮಾಡಬೇಕು. ಈಗ ಬಿಟ್ಟಿರುವ ಪ್ರಮುಖ ರಸ್ತೆಗಳನ್ನು ಕೂಡ 12 ಗಂಟೆಯ ನಂತರ ಕ್ಲೋಸ್ ಮಾಡುತ್ತೇವೆ. ಆಮೇಲೆ ಬೆಂಗಳೂರು ಸಂಪೂರ್ಣ ಸ್ತಬ್ಧವಾಗಲಿದೆ. ಕೇವಲ ಅಂಬುಲೆನ್ಸ್ ಮತ್ತು ತುರ್ತು ಪರಿಸ್ಥತಿ ಇದ್ದರೆ ಮಾತ್ರ ಅವಕಾಶ ಮಾಡಿಕೊಡುತ್ತೇವೆ. ಕೊರೊನಾ ಪರಿಸ್ಥಿತಿ ಹೇಗಿದೆ ಅನ್ನೋದು ಜನ ಅರ್ಥ ಮಾಡಿಕೊಳ್ಳಬೇಕು. ಕಳೆದ ಬಾರಿಯಂತೆ ವಾಹನ ಸವಾರರು ಅಡ್ಡಾದಿಡ್ಡಿ ಓಡಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಮಿಷನರ್ ಎಚ್ಚರಿಕೆ ನೀಡಿದರು.

ಜನರು ಸುಮ್ಮಸುಮ್ಮನೇ ಓಡಾಡುತ್ತಾರೆ. ರಸ್ತೆಯಲ್ಲಿ ಓಡಾಡಿ ಮನೆಗೆ ಸೋಕು ತೆಗೆದುಕೊಂಡು ಹೋಗುತ್ತಾರೆ. ಜನರು ಮನೆಯಲ್ಲಿದ್ದರೆ ಕೊರೊನಾ ಚೈನ್ ಬ್ರೇಕ್ ಆಗುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿದೆ. ಈ ಬಾರಿ ಪಾಸ್ ಇಲ್ಲ. ಈ ಬಾರಿ ಕಾರಣವಿಲ್ಲದೆ 12 ಗಂಟೆಯ ನಂತರ ರಸ್ತೆಯಲ್ಲಿ ಓಡಾಡಿದರೆ ವಾಹನ ಜಪ್ತಿ ಮಾಡುತ್ತೇವೆ. ಆ ವ್ಯಕ್ತಿಯ ಮೇಲೆ ಕೇಸ್ ದಾಖಲಿಸುತ್ತೇವೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಜನರು ಇನ್ನಾದರೂ ಗಂಭೀರವಾಗಿ ತೆಗೆದುಕೊಂಡು ಲಾಕ್‍ಡೌನ್ ವೇಳೆ ಮನೆಯಲ್ಲಿರಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *