ಸುಲಭ್ ಶೌಚಾಲಯ ಯೋಜನೆಗೆ ಮೋದಿಯ ಹೆಸರನ್ನು ಇಡಲಿ: ಹರಿಪ್ರಸಾದ್ ವ್ಯಂಗ್ಯ

Public TV
1 Min Read

ಬೆಂಗಳೂರು: ಸುಲಭ್ ಶೌಚಾಲಯ ಮೋದಿ ಯೋಜನೆ. ಅದಕ್ಕೆ ಪ್ರಧಾನಿ ಮೋದಿ ಅವರ ಹೆಸರಿಡಬೇಕು ಎಂದು ಕಾಂಗ್ರೆಸ್ ಮುಖಂಡ, ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ನರೇಂದ್ರ ಮೋದಿ ಗೇಮ್ ಚೇಂಜರ್ ಅಲ್ಲ. ನೇಮ್ ಚೇಂಜರ್ ಆಗಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರನ್ನು ಇವರು ಬದಲಾಯಿಸಬಹುದು. ಆದರೆ ಈ ನೆಲದ ಮೇಲೆ ಬಿದ್ದ ಇವರ ರಕ್ತ ಅಳಿಸಲು ಯಾರಿಗೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಇಂದಿರಾ ಗಾಂಧಿ ಹೆಸರು ಬದಲಾಯಿಸುವುದು ಹೀನ ಕುತಂತ್ರ ಕೆಟ್ಟ ರಾಜಕಾರಣ. ಅವರ ಬೋರ್ಡ್ ಎಲ್ಲೆಲ್ಲಿ ಇರುತ್ತದೋ ಅಲ್ಲೆಲ್ಲ ನಾವು ಮಸಿ ಬಳಿದು ಹೋರಾಟ ಮಾಡಬೇಕಾಗುತ್ತದೆ. ಮೊದಲು ಇವರು ಗೇಮ್ ಚೇಂಜರ್ ಅಂತ ಬಂದರು. ನೇಮ್ ಚೇಂಜರ್ ಆಗಿದ್ದಾರೆ ಎಂದು ಕಿಡಿಕಾರಿದರು.

ಇವರೆನಾದರೂ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಿದರೆ ನಾವು ಇವರ ಬೋರ್ಡ್‍ಗೆ ಮಸಿ ಬಳಿಯುತ್ತೇವೆ. ಗಾಂಧಿಯನ್ನು ಕೊಂದು ದೇಶ ದ್ರೋಹದ ಆಪಾದನೆ ಹೊತ್ತಿರುವ ಸಾವರ್ಕರ್ ಬೋರ್ಡ್ ಗೆ ನಾವು ಮಸಿ ಬಳಿಯುತ್ತೇವೆ. ಅವರು ಎಷ್ಟು ದೂರ ಹೋಗ್ತಾರೋ ಹೋಗಲಿ ನೋಡೋಣ ಎಂದರು. ಇದನ್ನೂ ಓದಿ : ಕ್ರೀಡೆಯಲ್ಲಿ ಅಲ್ಲ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ‘ಚಿನ್ನ’

ಈಶ್ವರಪ್ಪ ಹೇಳಿಕೆ ರಾಜ್ಯಕ್ಕೆ ಹೊಸತಲ್ಲ. ಸಿಎಂ ಆಗೋಕೆ ಸತತ ಕಾರ್ಯಾಚರಣೆ ಮಾಡುತ್ತಿದ್ದಾರೆ. ಈಶ್ವರಪ್ಪನವರಿಗೆ ಹುಚ್ಚು ಹಿಡಿದಿದೆ. ಸುಧಾಕರ್ ಅವರು ಈಶ್ವರಪ್ಪನವರನ್ನು ನಿಮಾನ್ಸ್ ಗೆ ಸೇರಿಸಿ ಒಳ್ಳೆಯ ಚಿಕಿತ್ಸೆ ನೀಡಬೇಕು ಎಂದು ವ್ಯಂಗ್ಯವಾಡಿದರು.

ಮನೆಯಲ್ಲಿ ನೋಟ್ ಎಣಿಸಿ ಹೈಕಮಾಂಡ್‍ಗೆ ಕೊಟ್ಟು ಸಿಎಂ ಆಗಲು ಹೋದವರಿಂದ ಏನು ನಿರೀಕ್ಷೆ ಸಾಧ್ಯ? ಕೂಡಲೇ ಈಶ್ವರಪ್ಪನವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *