ಸಿಬಿಐ, ಇಡಿ, ಐಟಿ ಈಗ ಎಲ್ಲಿದೆ? ಬಿಜೆಪಿ ಬ್ಲ್ಯಾಕ್‌ಮೇಲರ್ಸ್‌ ಜನತಾ ಪಾರ್ಟಿ- ಡಿಕೆಶಿ

Public TV
1 Min Read

ಬೆಂಗಳೂರು: ಬ್ಲಾಕ್‌ಮೇಲ್‌ ಮಾಡಿದವರು ಮತ್ತು ಭ್ರಷ್ಟಾಚಾರಿಗಳು ಸಂಪುಟ ಸೇರಿದ್ದಾರೆ ಎಂದು ಬಿಜೆಪಿ ನಾಯಕರೇ ಹೇಳಿದ್ದಾರೆ. ಹೀಗಾಗಿ ಹೈಕೋರ್ಟ್‌ ನಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಮೂಲಕ ಈ ಆರೋಪದ ಬಗ್ಗೆ ತನಿಖೆಯಾಗಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭ್ರಷ್ಟಾಚಾರ ಮತ್ತು ಬ್ಲಾಕ್‌ಮೇಲ್‌ ಆರೋಪ ಗಂಭೀರವಾಗಿದೆ. ಬಿಜೆಪಿಯವರೇ ಹೇಳಿದ ಕಾರಣ ಇದು ಐಪಿಸಿ ಅಪರಾಧದ ಅಡಿ ಸೇರಿಕೊಳ್ಳುತ್ತದೆ. ಯಾಕೆ ಸಿಸಿಬಿ ಪ್ರಕರಣ ದಾಖಲಿಸುತ್ತಿಲ್ಲ? ಸಿಬಿಐ, ಇಡಿ, ಐಟಿ ಈಗ ಎಲ್ಲಿದೆ? ಗಂಭೀರ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದರು.

ಸಿಡಿ ಒಳಗಡೆ ಏನಿದೆಯೋ ಅದನ್ನು ನೋಡಿದವರಿಗೆ ಗೊತ್ತಿರಬಹುದು. ನಾನು ಬಿಡುಗಡೆ ಮಾಡ್ತಿನೋ ಬಿಡ್ತಿನೋ ಅದು ಬಿಡಿ. ನಾನು ವಿಪಕ್ಷದವನು. ನಿಮ್ಮವರು ಹೇಳಿದ ಬಗ್ಗೆ ತನಿಖೆ ಆಗಬೇಕು. ಈಶ್ವರಪ್ಪ ಪಿಎ ವಿನಯ್ ದೂರು ಕೊಟ್ಟಿದ್ದ. ಬೇರೆ ಬೇರೆ ಸಿಡಿ ಬಗ್ಗೆ ಚರ್ಚೆ ಆಗಿತ್ತು. ನಾನು ಸಿಡಿ ಬಿಡುಗಡೆ ಮಾಡುವುದು ಇರಲಿ. ಅಲ್ಲಿ ಏನೇನಾಗಿತ್ತು? ಗೃಹ ಸಚಿವರು ಮೊದಲು ಇದನ್ನು ಟೇಕ್ ಓವರ್ ಮಾಡಬೇಕು. ಈ ಹಿಂದೆ ನಾನು ಕಾರವಾರದಲ್ಲಿ ಮಾತಾಡಿದ್ದೆ. ಇವತ್ತು ಇದನ್ನೇ ಮಾತನಾಡುತ್ತಿದ್ದೇನೆ. ನನ್ನನ್ನು ಸೇರಿಸಿ ಕೇಸು ಹಾಕಲಿ ಎಂದು ಹೇಳಿದರು.

ರಾಜ್ಯ ಹಾಗೂ ಕೇಂದ್ರದ ರೈತ ವಿರೋಧಿ ಕಾನೂನು ವಿರೋಧಿಸಿ ಕರ್ನಾಟಕದಲ್ಲಿ ಜನವರಿ 20 ರಂದು ರಾಜಭವನ ಮುತ್ತಿಗೆ ಹಾಗೂ ಬೃಹತ್ ಚಳುವಳಿ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *