ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ರದ್ದು

Public TV
2 Min Read

ನವದೆಹಲಿ: ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿ ನಿರ್ಧಾರ ಕೈಗೊಳ್ಳಲಾಗಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ರಾಜ್‍ನಾಥ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಪರೀಕ್ಷೆ ನಡೆಸುವ ಬಗ್ಗೆ ಸಾಧ್ಯಾಸಾಧ್ಯತೆ ಹಾಗೂ ಪರ್ಯಾಯ ಮಾರ್ಗಗಳ ಬಗ್ಗೆ ಪ್ರಧಾನಿ ಮೋದಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ ಕೊರೊನಾದ ಕಠಿಣ ಪರಿಸ್ಥಿತಿ ಸಮಯದಲ್ಲಿ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳು ಹಿತದೃಷ್ಟಿಯಿಂದ ಸುರಕ್ಷಿತವಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಜೂನ್ 3ರೊಳಗೆ ಸುಪ್ರೀಂ ಕೋರ್ಟ್‍ಗೆ ಪ್ರತಿಕ್ರಿಯೆ ನೀಡಲಿದೆ. ಹೀಗಾಗಿ ಇಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪರೀಕ್ಷೆ ನಡೆಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು. ಸಧ್ಯದ ಕೊರೊನಾ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ರದ್ದುಪಡಿಸಲಾಗಿದೆ.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಸಹ ಕೊರೊನಾ ನಂತರದ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಈ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿಲ್ಲ.

ಪರೀಕ್ಷೆ ರದ್ದುಗೊಳಿಸುವ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜೂನ್ 3ರಂದು ವಿಚಾರಣೆ ನಡೆಸಲಿದೆ. ಈ ವೇಳೆ ಪರೀಕ್ಷೆ ರದ್ದು ಕುರಿತು ಕೇಂದ್ರ ಸರ್ಕಾರ ತನ್ನ ನಿರ್ಧಾರ ತಿಳಿಸಬೇಕಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಸಭೆ ನಡೆಸಿದ್ದಾರೆ.

ಪರೀಕ್ಷೆ ನಡೆಸುವ ಕುರಿತು ಕೇಂದ್ರ ಸಚಿವ ರಾಜ್‍ನಾಥ್ ಸಿಂಗ್ ಸಭೆಯಲ್ಲಿ ಮಾಹಿತಿ ನೀಡಿದ್ದು, ಹಲವು ರಾಜ್ಯಗಳು ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ನಡೆಸುವ ಕುರಿತು ಇಂಗಿತ ವ್ಯಕ್ತಪಡಿಸಿವೆ. ಇನ್ನೂ ಹಲವು ರಾಜ್ಯಗಳು ರದ್ದುಗೊಳಿಸಲು ಮನವಿ ಮಾಡಿವೆ. ಕೆಲ ರಾಜ್ಯಗಳು ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ ಬಳಿಕ ಪರೀಕ್ಷೆ ನಡೆಸುವಂತೆ ಹೇಳಿವೆ ಎಂದು ರಾಜನಾಥ್ ಸಿಂಗ್ ಸಭೆಯಲ್ಲಿ ವಿವರಿಸಿದರು. ಅಲ್ಲದೆ ಬಹುಪಾಲು ಜನ ಪರೀಕ್ಷೆ ನಡೆಸುವುದರ ಪರವಾಗಿದ್ದು, ಜುಲೈ 15 ಹಾಗೂ ಆಗಸ್ಟ್ 26ರ ನಡುವೆ ಪರೀಕ್ಷೆಗಳನ್ನು ನಡೆಸಲು ಸಿಬಿಎಸ್‍ಇ ಸೂಚಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *