ಸಿದ್ದರಾಮಯ್ಯ ಜಾತಿ ಸಮಾವೇಶಕ್ಕೆ ಮುಹೂರ್ತ ಫಿಕ್ಸ್‌

Public TV
1 Min Read

ಬೆಂಗಳೂರು: ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಜಾತಿ ಸಮಾವೇಶಕ್ಕೆ ಮುಹೂರ್ತ ನಿಗದಿಯಾಗಿದ್ದು, ಮಾರ್ಚ್ 21 ರಂದು ಕಲಬುರಗಿಯಲ್ಲಿ ಕುರುಬ ಸಮಾವೇಶ ನಡೆಯಲಿದೆ.

ರಾಜ್ಯದಲ್ಲಿ ಒಟ್ಟು ನಾಲ್ಕು ಸಮಾವೇಶ ನಡೆಸಲು ತೀರ್ಮಾನ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಮೊದಲ ಸಮಾವೇಶ ಕಲಬುರಗಿಯಲ್ಲಿ ನಡೆಯಲಿದೆ. ಈ  ಸಮಾವೇಶದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಗೆದ್ದ ಕುರುಬ ಸಮುದಾಯದವರಿಗೆ ಸನ್ಮಾನ ನಡೆಯಲಿದೆ.

ಈ ಮೊದಲು ಮಾರ್ಚ್‌ 13 ರಂದು ಸಮಾವೇಶದ ದಿನಾಂಕ ನಿಗದಿಯಾಗಿತ್ತು. ಆದರೆ ಮಾರ್ಚ್‌ 13 ಅಮಾವಾಸ್ಯೆ ಇರುವ ಮಾರ್ಚ್‌ 21ಕ್ಕೆ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.

ಕಲಬುರಗಿಯಿಂದ ಬಂದಿದ್ದ ಕುರುಬ ಸಮುದಾಯದವರು ಮಾರ್ಚ್‌ 13 ರಂದು ಅಮಾವಾಸ್ಯೆ ಇರುವ ಕಾರಣ ಆ ದಿನ ಸಮಾವೇಶ ನಡೆಸುವುದು ಬೇಡ ಎಂದು ಸಿದ್ದರಾಮಯ್ಯ ಅವರನ್ನು ಮನವೊಲಿಕೆ ಮಾಡಿದ ಬಳಿಕ ದಿನಾಂಕ ಮುಂದೂಡಿಕೆಯಾಗಿದೆ.

ರಾಜ್ಯದಲ್ಲಿ ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಮಂಗಳವಾರ ದೆಹಲಿಗೆ ತೆರಳಿ ರಾಹುಲ್‌ ಗಾಂಧಿಯ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಮಾರ್ಚ್‍ನಿಂದಲೇ ಪಕ್ಷದ ನೇತೃತ್ವದಲ್ಲಿ ಬೃಹತ್ ಜಾತಿ ಸಮಾವೇಶಕ್ಕೆ ಸಿದ್ಧತೆ ಮಾಡುವ ಬಗ್ಗೆ ಚರ್ಚೆ ನಡೆಸಿ 1 ತಿಂಗಳ ಸಮಯ ಕೇಳಿದ್ದರು.

ಜಾತಿ ಸಮಾವೇಶಕ್ಕೂ ಮುನ್ನ ತಮ್ಮದೇ ಸರ್ಕಾರದಲ್ಲಿ ಸಿದ್ಧವಾಗಿದ್ದ ಜಾತಿಗಣತಿ ವರದಿ ಬಿಡುಗಡೆ ಮಾಡುವಂತೆ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಜಾತಿಗಣತಿ ವರದಿ ಬಹಿರಂಗವಾದರೆ ರಾಜ್ಯದಲ್ಲಿ ಹೊಸ ಜಾತಿ ಸಮೀಕರಣ ಲೆಕ್ಕಾಚಾರವಾಗುತ್ತದೆ. ಜಾತಿಗಣತಿ ವರದಿ ಪ್ರಕಾರ ರಾಜ್ಯದಲ್ಲಿ ಅಹಿಂದ ವರ್ಗಗಳ ಜನಸಂಖ್ಯೆಯೇ ಹೆಚ್ಚು ಎಂಬ ವಿಚಾರ ಈಗಾಗಲೇ ಸೋರಿಕೆಯಾಗಿದೆ. ಹೀಗಾಗಿ ಜಾತಿಗಣತಿ ಆಧರಿಸಿಯೇ ಜಾತಿ ಸಮಾವೇಶದ ರೂಪುರೇಷೆ ನಿರ್ಧಾರವನ್ನು ಸಿದ್ದರಾಮಯ್ಯ ಮಾಡಿದ್ದಾರೆ.

ಇಲ್ಲಿಯವರೆಗೂ ಸಿದ್ದರಾಮಯ್ಯ ಕುರುಬ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲೂ ಈಶ್ವರಪ್ಪ ಮತ್ತು ವಿಶ್ವನಾಥ್‌ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *