ಸಿಕ್ಸರ್, ಬೌಂಡರಿ ಸುರಿಮಳೆ – ಸ್ಟೊಯಿನಿಸ್ ಸ್ಫೋಟಕ ಆಟ, ಪಂಜಾಬ್‍ಗೆ 158 ರನ್ ಗುರಿ

Public TV
2 Min Read

ದುಬೈ: 13 ರನ್‍ಗೆ 3 ವಿಕೆಟ್ ಪತನ, 96 ರನ್‍ಗಳಿಸುವಷ್ಟರಲ್ಲಿ 6 ವಿಕೆಟ್ ಪತನ. ಆರಂಭಿಕ ಹಿನ್ನಡೆ ಕಂಡರೂ ಸ್ಟೊಯಿನಿಸ್ ಸ್ಪೋಟಕ ಆಟದಿಂದ ಡೆಲ್ಲಿ ಕ್ಯಾಪಿಟಲ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 158 ರನ್‍ಗಳ ಗುರಿಯನ್ನು ನೀಡಿದೆ.

ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಗ್ ಗೆದ್ದು ಕಿಂಗ್ಸ್ ಇಲೆವೆನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್‍ಗೆ ಬಂದ ದೆಹಲಿ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆದರೆ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಾರ್ಕಸ್ ಸ್ಟೊಯಿನಿಸ್ 53 ರನ್((20 ಎಸೆತ, 3 ಸಿಕ್ಸರ್ 7 ಬೌಂಡರಿ) ಭರ್ಜರಿ ಅರ್ಧ ಶತಕದ ನೆರವಿನಿಂದ ಡೆಲ್ಲಿ 157ರನ್ ಹೊಡೆಯಿತು.

ಪಂದ್ಯದ ಆರಂಭದಲ್ಲೇ ಎಡವಿದ ಡೆಲ್ಲಿ ತಂಡದ ಆರಂಭಿಕ ಬ್ಯಾಟ್ಸ್‍ಮ್ಯಾನ್ ಶಿಖರ್ ಧವನ್ ಎರಡನೇ ಓವರ್‍ನಲ್ಲಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಮೂರನೇ ಓವರ್‍ನಲ್ಲಿ ಶಮಿ ಬೌನ್ಸರ್ ಗೆ ಪೃಥ್ವಿ ಶಾ ವಿಕೆಟ್ ಒಪ್ಪಿಸಿದರು. ಅದೇ ಓವರ್‍ನಲ್ಲಿ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ಶಿಮ್ರಾನ್ ಹೆಟ್ಮಿಯರ್ ಕೂಡ ಕ್ಯಾಚ್ ಕೊಟ್ಟ ನಿರ್ಗಗಮಿಸಿದರು. ನಾಲ್ಕು ಓವರ್ ಮುಕ್ತಾಯಕ್ಕೆ 13 ರನ್‍ಗಳಿಸಿ ಡೆಲ್ಲಿ ಕ್ಯಾಪಿಟಲ್ 3 ವಿಕೆಟ್ ಕಳೆದುಕೊಂಡಿತ್ತು.

ನಂತರ ಜೊತೆಯಾದ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಉತ್ತಮ ಜೊತೆಯಾಟವಾಡಿದರು. ಇದರ ಪರಿಣಾಮ 10 ಓವರ್ ಮುಕ್ತಾಯಕ್ಕೆ ಡೆಲ್ಲಿ 49 ಪೇರಿಸಿತು. ಈ ವೇಳೆ ಕ್ಯಾಪ್ಟನ್ ಇನ್ನಿಂಗ್ಸ್ ಆಡಿದ ಐಯ್ಯರ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಭಾರಿಸಿದರು. ಇವರಿಗೆ ರಿಷಭ್ ಪಂತ್ 31 ರನ್(29 ಎಸೆತ) ಕೂಡ ಉತ್ತಮವಾಗಿ ಸಾಥ್ ನೀಡಿದರು. ಆದರೆ 13ನೇ ಓವರಿನ ಕೊನೆಯ ಬಾಲಿನಲ್ಲಿ ರವಿ ಬಿಷ್ಣೋಯ್ ಅವರಿಗೆ ಪಂತ್ ಬೌಲ್ಡ್ ಆದರು.

ಇದಾದ ನಂತರ 39 ರನ್ ಗಳಿಸಿ ಆಡುತ್ತಿದ್ದ ಶ್ರೇಯಸ್ ಐಯ್ಯರ್ 14ನೇ ಓವರ್‍ನಲ್ಲಿ ಶಮಿ ಬೌಲಿಂಗ್‍ಗೆ ಕ್ರಿಸ್ ಜೋರ್ಡಾನ್‍ಗೆ ಕ್ಯಾಚ್ ನೀಡಿದರು. ನಂತರ ಆಕ್ಸಾರ್ ಪಟೇಲ್ ಶೆಲ್ಡನ್ ಕಾಟ್ರೆಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಯಾವುದೇ ಆಟಗಾರ ಕ್ರಿಸ್‍ನಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಆದರೆ ಮಾರ್ಕಸ್ ಸ್ಟೊಯಿನಿಸ್ ಮಾತ್ರ ಉತ್ತಮವಾಗಿ ಬ್ಯಾಟ್ ಬೀಸಿ ತಂಡ 157 ರನ್ ಸೇರಿದುವಲ್ಲಿ ಉತ್ತಮ ಕೊಡುಗೆ ನೀಡಿದರು.

ಸ್ಟೊಯಿನಿಸ್ ಆಟದಿಂದ 18ನೇ ಓವರ್ ನಲ್ಲಿ 13 ರನ್, 19 ನೇ ಓವರ್ ನಲ್ಲಿ 14 ರನ್, 20ನೇ ಓವರ್ ನಲ್ಲಿ 30 ರನ್ ಡೆಲ್ಲಿ ತಂಡಕ್ಕೆ ಬಂದಿತ್ತು. ಜೋರ್ಡನ್ ಎಸೆದ ಕೊನೆಯ ಓವರ್ ನಲ್ಲಿ 2 ಸಿಕ್ಸರ್, 3 ಬೌಂಡರಿಯನ್ನು ಸ್ಟೊಯಿನಿಸ್ ಚಚ್ಚಿದ್ದರು.

ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಉತ್ತಮವಾಗಿ ಬೌಲ್ ಮಾಡಿದ ಅನುಭವಿ ವೇಗಿ ಮೊಹಮ್ಮದ್ ಶಮಿಯವರು ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು ಕೇವಲ 15 ರನ್ ನೀಡಿದರು. ಇವರಿಗೆ ಉತ್ತಮವಾಗಿ ಸಾಥ್ ಕೊಟ್ಟ ಶೆಲ್ಡನ್ ಕಾಟ್ರೆಲ್ ಅವರು ನಾಲ್ಕು ಓವರ್ ಬೌಲ್ ಮಾಡಿ 24 ರನ್ ನೀಡಿ 2 ವಿಕೆಟ್ ಪಡೆದರು. ಇದೇ ವೇಳೆ ರವಿ ಬಿಷ್ಣೋಯ್ ಅವರು ಕೂಡ ತಮ್ಮ ಚೊಚ್ಚಲ ಐಪಿಎಲ್ ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *