ಸಿಎಸ್‍ಕೆ ದೀಪಕ್ ಚಹರ್‌ಗೆ ಕೊರೊನಾ – ಮುಂದಕ್ಕೆ ಹೋಗುತ್ತಾ ಐಪಿಎಲ್?

Public TV
2 Min Read

– ಬಿಸಿಸಿಐ ಲೆಕ್ಕಾಚಾರವೇನು?

ಅಬುಧಾಬಿ: ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಓರ್ವ ವೇಗದ ಬೌಲರ್ ಮತ್ತು ಕೆಲ ಸಹಾಯಕ ಸಿಬ್ಬಂದಿಗೆ ಕೊರೊನಾ ಪಾಸಿಟವ್ ಬಂದಿದೆ ಎಂಬ ಸುದ್ದಿ ಹೊರಬಿದ್ದಿತ್ತು.

ಆದರೆ ಸಿಎಸ್‍ಕೆ ತಂಡದಲ್ಲಿ ಯಾವ ವೇಗಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿದಿರಲಿಲ್ಲ. ಈಗ ಆ ಮಾಹಿತಿ ಹೊರಬಂದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವೇಗಿ ದೀಪಕ್ ಚಹರ್‌ಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ಮಾಹಿತಿ ಲಭಿಸಿದೆ. ದೀಪಕ್ ಚಹರ್ ಜೊತೆಗೆ ತಂಡದ 10 ಸಹಾಯಕ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿದೆ.

ಐಪಿಎಲ್ ಆರಂಭವಾಗಲು ಕೇವಲ ಇನ್ನು 20 ದಿನ ಮಾತ್ರ ಬಾಕಿ ಉಳಿದಿದೆ. ಇದರ ಮಧ್ಯೆ ಮುಂದಿನ ವಾರದಲ್ಲಿ ಬಿಸಿಸಿಐ ಐಪಿಎಲ್ ಪಂದ್ಯಗಳ ಔಪಚಾರಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿತ್ತು. ಆದರೆ ಈಗ ಪರಿಸ್ಥಿತಿ ಸ್ವಲ್ಪ ಬಿಗುಡಯಾಸಿದ್ದು, ಸದ್ಯಕ್ಕೆ ಪರಿಸ್ಥಿತಿ ಹಿಡಿತಕ್ಕೆ ಬರುವವರೆಗೂ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವುದು ಬೇಡ ಎಂದು ಬಿಸಿಸಿಐ ತೀರ್ಮಾನಿಸಿದೆ. ಹೀಗಾಗಿ ಐಪಿಎಲ್ ಮತ್ತೆ ಮುಂದಕ್ಕೆ ಹೋಗುತ್ತಾ ಎಂಬ ಅನುಮಾನ ಮೂಡಿದೆ.

ಸದ್ಯ ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಈಗ ಪಂದ್ಯಾವಳಿಗಳನ್ನು ತಕ್ಷಣದ ಆರಂಭ ಮಾಡಬೇಕು ಎಂಬ ಯಾವುದೇ ತುರ್ತು ಪರಿಸ್ಥಿತಿಯಿಲ್ಲ. ಈಗ ಆಗಿರುವ ಬೆಳವಣಿಗೆಯಿಂದಾಗಿ ಪಂದ್ಯಗಳ ಘೋಷಣೆ ವಿಳಂಬವಾಗಿದೆ. ಪರಿಸ್ಥಿತಿ ನಮ್ಮ ಹಿಡಿತಕ್ಕೆ ಬಂದ ನಂತರ ನಾವು ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಬಿಸಿಸಿಐನ ಉನ್ನತ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗಸ್ಟ್ 21ರಂದೇ ಯುಎಇಗೆ ತೆರಳಿತ್ತು. ಎಂದಿನಂತೆ ಎಲ್ಲ ಆಟಗಾರರಿಗೆ ಭಾರತದಲ್ಲೂ ಕೂಡ ಒಂದು ಬಾರಿ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅಂತೆಯೇ ಯುಎಇಗೆ ತೆರಳಿದ ತಂಡ ಅಲ್ಲಿ ಆರು ದಿನಗಳ ಕಾಲ ಕ್ವಾರಂಟೈನ್‍ಗೆ ಒಳಗಾಗಿತ್ತು. ಶುಕ್ರವಾರಕ್ಕೆ ಆ ಅವಧಿ ಮುಗಿಯಲಿದ್ದು, ಚೆನ್ನೈ ತಂಡ ಅಭ್ಯಾಸ ನಡೆಸಬೇಕಿತ್ತು. ಆದರೆ ಕೊರೊನಾ ಟೆಸ್ಟ್ ನಲ್ಲಿ ತಂಡದ ಸದಸ್ಯರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಹೀಗಾಗಿ ತಂಡ ಸೆಪ್ಟೆಂಬರ್ 1ರಿಂದ ಅಭ್ಯಾಸ ಆರಂಭಿಸಲಿದೆ.

ಕೊರೊನಾ ವೈರಸ್ ಕಾರಣದಿಂದಲೇ ಕಳೆದ ಮಾರ್ಚ್‍ನಲ್ಲೇ ನಡೆಯಬೇಕಿದ್ದ, ಐಪಿಎಲ್-2020 ಮುಂದಕ್ಕೆ ಹೋಗಿತ್ತು. ಭಾರತದಲ್ಲಿ ಕೊರೊನಾ ಹಿಡಿತಕ್ಕೆ ಸಿಗದ ಹಿನ್ನೆಲೆ ಸೋಂಕಿನ ಪ್ರಮಾಣ ಕಮ್ಮಿ ಇರುವ ಯುಎಇಯಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. ಅಂತೆಯೇ ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನವೇ ಐಪಿಎಲ್ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *