ಸಿಎಂ ಸೇರಿದಂತೆ ಸಚಿವರು ಮಾತಿನ ಮಂಟಪ ಕಟ್ತಿದ್ದಾರೆ- ಸರ್ಕಾರಕ್ಕೆ ಹೆಚ್‍ಡಿಕೆ ಟ್ವೀಟೇಟು

Public TV
1 Min Read

ಬೆಂಗಳೂರು: ಕೊರೊನಾವನ್ನು ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗದೆ ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಈ ಸಮಯದಲ್ಲಿ ಸೋಂಕಿತನ ಚಿಕಿತ್ಸೆಗೆ ಬೆಡ್‍ಗಳು ಇಲ್ಲದೇ ರೋಗಿಗಳು ಮನೆಯಲ್ಲಿ ಸಾಯುತ್ತಿದ್ದಾರೆ. ಇನ್ನೊಂದೆಡೆ ಶವ ಸಂಸ್ಕಾರ ಮಾಡಲು ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ.

ಟ್ವೀಟ್‍ನಲ್ಲೇನಿದೆ?
ಕೊರೊನಾ ಸೋಂಕು ಪೀಡಿತರು ಬೆಡ್ ಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಳೆದ ಮೂರು ತಿಂಗಳಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವರುಗಳು ಮಾತಿನ ಮಂಟಪ ಕಟ್ಟುವುದರಲ್ಲಿ ಕಾಲ ಕಳೆದರು ಎಂದು ವಾಗ್ದಾಳಿ ಮಾಡಿದ್ದಾರೆ.

ಜೊತೆಗೆ ಸರ್ಕಾರ ಈಗ ಇಂಗು ತಿಂದ ಮಂಗನಂತಾಗಿದ್ದು, ಸೋಂಕಿತರ ಸಂಖ್ಯೆಯ ಗಣನೀಯ ಏರಿಕೆಯನ್ನು ತಡೆಯಲು ಪೇಚಾಡುತ್ತಿದೆ. ನೆರೆಯ ಕೇರಳ ಸರ್ಕಾರ ಕೊರೊನಾ ತಡೆಗೆ ಕೈಗೊಂಡ ಕ್ರಮಗಳ ‘ಸಿದ್ಧ’ ಮಾದರಿ ಕಣ್ಣೆದುರಿಗಿದೆ. ರಾಜ್ಯದ ಸಚಿವರಲ್ಲಿ ಸಮನ್ವಯವಿಲ್ಲ, ಒಬ್ಬೊಬ್ಬರದು ಒಂದೊಂದು ನಿಲುವು. ಇವರ ತಿಕ್ಕಾಟದಲ್ಲಿ ರಾಜ್ಯದ ಜನತೆ ಹೈರಾಣಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೊರೊನಾ ಸೋಂಕು ಶರವೇಗದಲ್ಲಿ ಎಲ್ಲೆಡೆ ವ್ಯಾಪಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯಾದ್ಯಂತ ಸೋಂಕಿತರು ಚಿಕಿತ್ಸೆಯಿಲ್ಲದೆ ಸಾಯುತ್ತಿರುವ ಘಟನೆಗಳು ಕರುಳು ಹಿಂಡುತ್ತಿವೆ. ಸರ್ಕಾರ ಇನ್ನೂ ಮೈಮರೆತರೆ ಸೋಂಕಿತರು ಬೀದಿ ಬೀದಿಯಲ್ಲಿ ಸಾಯುವ ಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರ ಇನ್ನಾದರೂ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಲಿ ಕೊರೊನಾ ಸಮರ್ಪಕ ನಿರ್ವಹಣೆಗೆ ನಾನು ಕೊಟ್ಟ ಹತ್ತಾರು ಸಲಹೆಗಳನ್ನು ಲಘುವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *