ಉಡುಪಿ: ಜಿಲ್ಲೆಯಲ್ಲಿ ಸಾಂಕ್ರಾಮಿಕ ಕೊರೊನಾ ಪಾಸಿಟಿವ್ ಪ್ರಕರಣ ವ್ಯಾಪಕವಾಗಿ ಹಬ್ಬುತ್ತಿದೆ. ಪ್ರತಿದಿನ ನೂರರ ಆಸುಪಾಸಿನಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಪಾಸಿಟಿವಿಟಿ ರೇಟ್ 2- 3 ಶೇಕಡಾ ದಾಖಲಾಗುತ್ತಿದ್ದು, ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ಬಂದು ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗ ರಾಜ್ಯದ ಇತರ ಜಿಲ್ಲೆಗಳಲ್ಲಿ ಇಳಿಮುಖವಾಗಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಪ್ರತಿದಿನ ನೂರರ ಆಸುಪಾಸಿನಲ್ಲಿ ಪ್ರಕರಣಗಳು ಗೋಚರವಾಗುತ್ತಿದೆ. ಜಿಲ್ಲೆಯಲ್ಲಿ ಸೆಕ್ಷನ್ 144(3) ಜಾರಿ ಮಾಡಲಾಗಿದೆ. ಸಭೆ ಸಮಾರಂಭಗಳಿಗೆ ಅವಕಾಶ ನೀಡಲಾಗುತ್ತಿಲ್ಲ. ಆದರೂ ಪ್ರಾಥಮಿಕ ಸಂಪರ್ಕದಿಂದಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಬರುತ್ತಿದೆ.
ಸಿಎಂ ಬಸವರಾಜ ಬೊಮ್ಮಾಯಿ ಗಡಿ ಮತ್ತು ಪಕ್ಕದ ಜಿಲ್ಲೆಯಲ್ಲಿ ಕೊರೊನಾ ವ್ಯಾಪಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈಗಾಗಲೇ ಎರಡು ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಗುರುವಾರ ನೂತನ ಸಿಎಂ ಕರಾವಳಿ ಜಿಲ್ಲೆಯ ಪ್ರವಾಸ ಮಾಡಲಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3 ಕ್ಕೆ ಉಡುಪಿ ಜಿಲ್ಲೆಗೆ ಆಗಮಿಸಲಿರುವ ಸಿಎಂ ಬೊಮ್ಮಾಯಿ, ಮಣಿಪಾಲದ ರಜತಾದ್ರಿ ಜಿಲ್ಲಾಧಿಕಾರಿಗಳ ಸಂಕೀರಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಒಂದು ವರ್ಷ
ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಿಎಂ ಶಂಕುಸ್ಥಾಪನೆ
ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಬೇರ್ಪಟ್ಟು 24 ವರ್ಷ ಆಗಿದೆ. ನೂತನ ಜಿಲ್ಲೆಯಾಗಿ ಉಡುಪಿಯನ್ನು ಘೋಷಣೆ ಮಾಡಿದಾಗ ತಾಲೂಕು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಘೋಷಣೆ ಮಾಡಲಾಗಿತ್ತು. ಎರಡು ದಶಕ ಕಳೆದರೂ ಜಿಲ್ಲೆಗೊಂದು ಸುಸಜ್ಜಿತ ಜಿಲ್ಲಾಸ್ಪತ್ರೆ ಇರಲಿಲ್ಲ. ಹಿಂದಿನ ಸಿಎಂ ಬಿಎಸ್ ಯಡಿಯೂರಪ್ಪ ಉಡುಪಿ ಜಿಲ್ಲಾ ಆಸ್ಪತ್ರೆಗೆ ಅನುದಾನ ತೆಗೆದಿಟ್ಟಿದ್ದರು. ಉಡುಪಿ ಪ್ರವಾಸ ಕೈಗೊಳ್ಳಲಿರುವ ಸಿಎಂ ಬಸವರಾಜ ಬೊಮ್ಮಾಯಿ ಹೊಸ ಆಸ್ಪತ್ರೆಗೆ ಗುದ್ದಲಿ ಪೂಜೆ ಮಾಡಲಿದ್ದಾರೆ ಎಂದು ಶಾಸಕ ರಘುಪತಿ ಭಟ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ‘ಬೀಪ್’ ಹಾಕುವ ಪದ ಬಳಸಿದ ಮಂತ್ರಿ ಈಶ್ವರಪ್ಪ- ಕಾಂಗ್ರೆಸ್‍ನವರು ಕುಡುಕ ….. ಮಕ್ಕಳು ಎಂದ ಸಚಿವ