ಸಿಎಂ ಬಿಎಸ್‍ವೈ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ- ಇಂದು ಸದನದಲ್ಲಿ ಚರ್ಚೆ

Public TV
2 Min Read

– ಶಾಸಕರಿಗೆ ಎರಡೂ ಪಕ್ಷಗಳ ವಿಪ್

ಬೆಂಗಳೂರು: ಕಾಂಗ್ರೆಸ್ ಪಕ್ಷ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ವಿರುದ್ಧ ಅವಿಶ್ವಾಸ ಮಂಡನೆ ಮಾಡಿರುವ ಹಿನ್ನೆಲೆಯಲ್ಲಿ ಎರಡು ಪಕ್ಷ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ.

ಇಂದು ಸದನದಲ್ಲಿ ವಿಶ್ವಾಸ ಸಾಬೀತು ಮಾಡಬೇಕಾದ ಹಿನ್ನೆಲೆಯಲ್ಲಿ ಕಲಾಪ ಸಾಕಷ್ಟು ಕುತೂಹಲ ಮೂಡಿಸಿದೆ. ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಇದಕ್ಕೆ ಕಾಂಗ್ರೆಸ್‍ನ 23 ಶಾಸಕರು ಎದ್ದು ನಿಂತು ಬೆಂಬಲ ಸೂಚಿಸಿದ್ದರು. ಹೀಗಾಗಿ ಅವಿಶ್ವಾಸ ನಿರ್ಣಯ ಮಂಡನೆಗೆ ಕೋರಂ ಇದೆ ಎಂದ ಸ್ಪೀಕರ್ ಕಾಗೇರಿ, ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿದ್ದರು.

ಅವಿಶ್ವಾಸ ಮಂಡನೆ ನಡುವೆಯೇ ನಡೆದ ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಿಎಂ ಬಿಎಸ್‍ವೈ ಗೌಪ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇಬ್ಬರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಕಳೆದ 15 ದಿನದಲ್ಲಿ ಇಬ್ಬರು ನಾಯಕರು ಮೂರನೇ ಬಾರಿಗೆ ಭೇಟಿಯಾಗಿದ್ದಾರೆ. ಸಿಎಂ ಅವರ ಕೊಠಡಿಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಇಬ್ಬರು ನಾಯಕರು ಮಾತುಕತೆ ನಡೆಸಿದರು.


ಈ ಕುರಿತಂತೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬಿಎಸ್‍ವೈ, ಪ್ರತಿ ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ನವರು ಹೀಗೆ ಮಾಡುತ್ತಾ ಇರಲಿ. ಹೀಗೆ ಮಾಡುವವರಿಂದ ನನಗೆ ಆರು ತಿಂಗಳ ಕಾಲ ವಿಶ್ವಾಸ ಬರುತ್ತೆ. ನನಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಇತ್ತ ವಿಧಾನ ಮಂಡಲ ಅಧಿವೇಶನ ಕೊನೆಯ ದಿನವಾದ ಇಂದು ವಿಧಾನ ಪರಿಷತ್ ನಲ್ಲಿ ವಿಧಾನಸಭೆಯಿಂದ ಅಂಗೀಕಾರವಾಗಿರುವ 9 ವಿಧೇಯಗಳು ಮಂಡನೆಯಾಗಲಿವೆ. ವಿಧೇಯಕಗಳ ಮೇಲೆ ಚರ್ಚೆ ನಡೆಯಲಿದೆ. ಕರ್ನಾಟಕ ಧನವಿನಿಯೋಗ ವಿಧೇಯಕ, ಕರ್ನಾಟಕ ಸಾದಿಲ್ವಾರು ನಿಧಿ ವಿಧೇಯಕ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಧೇಯಕ, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ವಿಧೇಯಕ ಸೇರಿ 9 ಬಿಲ್ ಗಳು ಮಂಡನೆಯಾಗಿ, ಚರ್ಚೆ ಆಗಲಿದೆ. ಉಳಿದಂತೆ ಗಮನ ಸೆಳೆಯುವ ಸೂಚನೆ, ನಿಯಮ 330 ಅಡಿ ಚರ್ಚೆ, ಕೃಷ್ಣ ಮೇಲ್ದಂಡೆ 3 ನೇ ಹಂತದ ಕಾಮಗಾರಿ ಕುರಿತು ನಿನ್ನೆ ನಡೆದ ಚರ್ಚೆ ಮುಂದುವರೆದು ಇಂದು ಮತ್ತೆ ಚರ್ಚೆ ನಡೆಯಲಿವೆ.

Share This Article
Leave a Comment

Leave a Reply

Your email address will not be published. Required fields are marked *