ಸಿಎಂ ಬದಲಾವಣೆ ಮಾಡಿದ್ರೆ ಮುಂದಿನ ಅಭ್ಯರ್ಥಿ ನಾನೇ: ಉಮೇಶ್ ಕತ್ತಿ

Public TV
3 Min Read

– ಸಿಎಂ ಆಗಲು ಎಲ್ಲಾ ಯೋಗ್ಯತೆಗಳು ನನ್ನಲ್ಲಿವೆ
– ಯಾವುದೇ ರೀತಿಯ ಬ್ಲ್ಯಾಕ್ ಸ್ಪಾಟ್ ನನ್ನಲ್ಲಿಲ್ಲ

ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ವಿಚಾರವಾಗಿ, ಸಿಎಂ ಬದಲಾವಣೆ ಮಾಡಿದ್ರೆ ಮುಂದಿನ ಅಭ್ಯರ್ಥಿ ನಾನೇ ಎಂದು ಆಹಾರ ಸಚಿವ ಉಮೇಶ್ ಕತ್ತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕತ್ತಿ, ಹುಕ್ಕೇರಿ ಮತಕ್ಷೇತ್ರದ ಜನ 8 ಬಾರಿ ಶಾಸಕನಾಗಿ ಮಾಡಿ ಆಶೀರ್ವಾದ ಮಾಡಿದ್ದಾರೆ. ಎಂಟು ಬಾರಿ ಶಾಸಕನಾದ ಮೇಲೆ ಮಂತ್ರಿ ಆಗಬೇಕೆಂಬ ಆಸೆ ಇತ್ತು, ನಾಲ್ಕು ಬಾರಿ ರಾಜ್ಯದ ಮಂತ್ರಿಯಾಗಿ ನಾನು ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಆಗಲು ಎಲ್ಲಾ ಯೋಗ್ಯತೆಗಳು ನನ್ನಲ್ಲಿ ಇವೆ. ಯಾವುದೇ ರೀತಿಯ ಬ್ಲ್ಯಾಕ್ ಸ್ಪಾಟ್ ನನ್ನಲ್ಲಿ ಇಲ್ಲ, ಕಳಂಕರಹಿತ ವ್ಯಕ್ತಿತ್ವ ಇದೆ. ಅದರ ಜೊತೆ ಹುಕ್ಕೇರಿ ಜನರ ಆಶೀರ್ವಾದ ಇದೆ. ರಾಜ್ಯದ ಜನ ಆಶೀರ್ವದಿಸಿದ್ರೆ, ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದ್ರೆ ನಾನು ಸಿಎಂ ಆಗುವ ಆಸೆ ಉಳ್ಳವನು ಎಂದಿದ್ದಾರೆ.

ಪಕ್ಷ ಮನಸ್ಸು ಮಾಡಿದ್ರೆ ರಾಜ್ಯದ ಸಿಎಂ ಆಗಬೇಕೆಂದು ಮನಸು ಮಾಡಿದ್ದೇನೆ. ಆದರೆ ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ, ಹೀಗಾಗಿ ಅದರ ಬಗ್ಗೆ ಚರ್ಚಿಸಲ್ಲ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕರೆದ ಸಂಘಟನಾತ್ಮಕ ಸಭೆಗೆ ಬಂದಿದ್ದೇನೆ. ರಾಜ್ಯದಲ್ಲಿ ಸಿಎಂ ಇದ್ದಾರೆ, ಸರ್ಕಾರ ಇದೇ ಒಳ್ಳೆಯ ಸರ್ಕಾರ ನಡೀತಿದೆ. ಕಳೆದ ವರ್ಷದಿಂದ ಸಿಎಂ ಬದಲಾವಣೆ ಕೂಗು ಇದ್ದೇ ಇದೆ ಅದು ಯಾರು ಬದಲಾಯಿಸುತ್ತಿದ್ದಾರೋ ನನ್ನ ಗಮನಕ್ಕೆ ಬಂದಿಲ್ಲ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಉಮೇಶ್ ಕತ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಎಂ ಹುದ್ದೆ ಖಾಲಿ ಇಲ್ಲ, ಖಾಲಿ ಆದಾಗ ಆ ಬಗ್ಗೆ ವಿಚಾರ ಮಾಡುತ್ತೇನೆ. ಈಗ ಸಿಎಂ ಸ್ಥಾನ ಬದಲಾವಣೆ ಆದರೆ ಉತ್ತರ ಕರ್ನಾಟಕಕ್ಕೆ ಕೊಡಬೇಕೆಂಬುದು ನಮ್ಮ ವಾದ. ಯಾರೇ ಸಿಎಂ ಆದರೂ ಅಖಂಡ ರಾಜ್ಯ ಆಳುವ ಸಿಎಂ ಇರಬೇಕು. ಸಿಎಂ ಹುದ್ದೆ ಖಾಲಿ ಆದ್ರೆ ಮುಂದಿನ ಅಭ್ಯರ್ಥಿ ನಾನೇ. ಸಿಎಂ ಸ್ಥಾನ ಬದಲಾವಣೆ ಆದ್ರೆ ನಂದೇ ನಂಬರ್ ಇದೆ. ಅವಧಿ ಮತ್ತು ಕಳಂಕರಹಿತ ಎಲ್ಲ ಅರ್ಹತೆ ಇರುವ ಕ್ಯಾಂಡಿಡೇಟ್ ನಾನು. ನಸೀಬ್ ಗಟ್ಟಿ ಇದ್ರೆ, ಹೈಕಮಾಂಡ್ ನಿರ್ಣಯ ಮಾಡಿದರೆ ನಾನು ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದೇನೆ. ಈ ಬಗ್ಗೆ ಬೆಳಗಾವಿಯಲ್ಲಿ ನಾನು ಯಾವುದೇ ಸಭೆ ಮಾಡಿಲ್ಲ ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ನೀವೇ ಹೇಳುತ್ತಿದ್ದೀರಿ. ಯತ್ನಾಳ್ ಬೆಳಗಾವಿಗೆ ಬರುತ್ತಿರುತ್ತಾರೆ. ನಾನು ವಿಜಯಪುರಕ್ಕೆ ಹೋಗುತ್ತಿರುತ್ತೇನೆ. ಎಲ್ಲರೂ ಕೂಡಿ ಊಟ ಮಾಡಿದ್ದೇವೆ ವಿನಃ ನಾವು ಯಾವುದೇ ಸಭೆ ಮಾಡಿಲ್ಲ ಎಂದರು. ಇದನ್ನೂ ಓದಿ: ಸಿಎಂ ಮಾಡಿ ಅಂದವರಿಗೆ ಮೋದಿ ಕಪಾಳಕ್ಕೆ ಹೊಡಿತಾರೆ: ಯತ್ನಾಳ್

ನಳಿನ್‍ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ನಳಿನ್ ಕುಮಾರ್ ಕಟೀಲ್ ಆಡಿಯೋ ಬಗ್ಗೆ ಅವರು ತಮ್ಮ ಅನಿಸಿಕೆ ಹೇಳಿರಬಹುದು. ನಾನು ನಳಿನ್ ಕುಮಾರ್ ಕಟೀಲ್ ಅನಿಸಿಕೆ ನೋಡಿಲ್ಲ, ನೋಡಿದ ಮೇಲೆ ಪ್ರತಿಕ್ರಿಯಿಸುತ್ತೇನೆ. ಕಟೀಲ್ ತಮ್ಮ ಆಡಿಯೋ ಅಲ್ಲ ಅಂದಾಗ ನಾನೇನು ಪ್ರತಿಕ್ರಿಯೆ ನೀಡಲಿ. ಆ ಆಡಿಯೋ ಯಾರು ಮಾಡಿದ್ದು ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ನೀವೇ ಮಾಡಿರಬಹುದು ಎಂದು ಉಮೇಶ್ ಕತ್ತಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದರು. ಇದನ್ನೂ ಓದಿ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಬುದ್ಧರು: ಉಮೇಶ್ ಕತ್ತಿ

ದೆಹಲಿ ಭೇಟಿ ವಿಚಾರವಾಗಿ, ಜೋಳದ ಬೆಂಬಲ ಬೆಲೆ ಚರ್ಚೆಗೆ ನಾನು 6 ಬಾರಿ ದೆಹಲಿ ಭೇಟಿ ನೀಡಿದ್ದು ನಿಜ. ಜೋಳದ ಬೆಂಬಲ ಬೆಲೆ ಮೂರುವರೆ ಸಾವಿರದಿಂದ ನಾಲ್ಕು ಸಾವಿರವರೆಗೂ ಮಾಡಬೇಕೆಂಬ ಆಸೆ ಇದೆ ಎಂದು ನುಡಿದರು.

Share This Article
Leave a Comment

Leave a Reply

Your email address will not be published. Required fields are marked *