ಸಿಎಂ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಭೆ- ಕೊರೊನಾ ನಿಯಂತ್ರಣಕ್ಕೆ ಯಾವ ಸಚಿವರಿಗೆ ಏನು ಜವಾಬ್ದಾರಿ?

Public TV
3 Min Read

– ಸೋಂಕು ಪ್ರದೇಶಗಳ ಕಟ್ಟುನಿಟ್ಟಿನ ಸೀಲ್‍ಡೌನ್‍ಗೆ ಸಿಎಂ ಸೂಚನೆ

ಬೆಂಗಳೂರು: ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ತೀವ್ರ ಗೊಂದಲಕ್ಕೊಳಗಾಗಿದೆ, ಸಚಿವರಲ್ಲೇ ಹೊಂದಾಣಿಕೆ ಇಲ್ಲ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೊನಾ ಕಟ್ಟಿ ಹಾಕಲು ಟಾಸ್ಕ್‌ಫೋರ್ಸ್ ಸಭೆ ನಡೆಸಿದ್ದು, ಸಚಿವರಿಗೆ ವ್ಯವಸ್ಥಿತವಾಗಿ ಜಚಾಬ್ದಾರಿ ಹಂಚಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದು, ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚು ಕಾಣಿಸಿಕೊಂಡಿರುವ ಪ್ರದೇಶಗಳನ್ನು ಕಟ್ಟುನಿಟ್ಟಾಗಿ ಸೀಲ್‍ಡೌನ್ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಬೆಂಗಳೂರು ನಗರದ ಕೆಲವೆಡೆ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಅಂತಹ ಪ್ರದೇಶಗಳನ್ನು ಗುರುತಿಸಿ ಸೀಲ್‍ಡೌನ್ ಮಾಡುವಂತೆ ಇಂದು ಮಧ್ಯಾಹ್ನ ನಡೆದ ಕೋವಿಡ್-19 ನಿಗ್ರಹ ಕಾರ್ಯಪಡೆ ಸಭೆಯಲ್ಲಿ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಅಧಿಕಾರಿಗಳು, ವೈದ್ಯರು ಮತ್ತು ಎಲ್ಲ ಸಿಬ್ಬಂದಿ ಪರಿಶ್ರಮದಿಂದ ಕೆಲಸ ಮಾಡಿದ್ದರಿಂದಲೇ ಕರ್ನಾಟಕ ಇಂದು ಸಮಾಧಾನಕರ ಸ್ಥಿತಿಯಲ್ಲಿದೆ. ಇತ್ತೀಚೆಗೆ ಬೆಂಗಳೂರು ನಗರ ಮತ್ತು ಕೆಲ ಜಿಲ್ಲೆಗಳಲ್ಲಿ ಅನೇಕ ಕಾರಣಗಳಿಂದ ಸೋಂಕು ಹೆಚ್ಚಿದೆ. ಅದನ್ನು ನಿಯಂತ್ರಿಸಿ ಕೋವಿಡ್-19 ಹಿಮ್ಮೆಟ್ಟಿಸಲು ಮುಂದಿನ ದಿನಗಳಲ್ಲಿ ಎಲ್ಲರೂ ಇನ್ನಷ್ಟು ಪರಿಶ್ರಮದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದಾರೆ ಎಂದರು.

ಜವಾಬ್ದಾರಿ ಹಂಚಿಕೆ: ಇಡೀ ವ್ಯವಸ್ಥೆ ಅಚ್ಚುಕಟ್ಟಾಗಿ, ಪಾರದರ್ಶಕ ರೀತಿಯಲ್ಲಿ ಕಾರ್ಯಾಚರಣೆ ನಡೆಸಬೇಕು. ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುವ ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ಸಚಿವರು ಸಂಘಟಿತವಾಗಿ ಕೆಲಸ ಮಾಡಬೇಕು ಎಂದಿದ್ದಾರೆ. ಅಲ್ಲದೆ ಕೋವಿಡ್ ವಿಷಯಕ್ಕೆ ಸಂಬಂಧಿಸಿದ ಎಲ್ಲ ನೀತಿ, ನಿರೂಪಣೆ, ಮಾರ್ಗಸೂಚಿ, ಮಾಧ್ಯಮಗಳಿಗೆ ಮಾಹಿತಿ ನೀಡುವುದು, ವಾರ್ ರೂಮ್ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕೋವಿಡ್ ಕೇರ್ ಸೆಂಟರ್ ಗಳ ಸ್ಥಾಪನೆ ಮತ್ತು ನಿರ್ವಹಣೆಯನ್ನು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರಿಗೆ ಹಂಚಿಕೆ ಮಾಡಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದಶಿ ವಿಶ್ವನಾಥ್ ಅವರಿಗೆ ಖಾಸಗಿ ಆಸ್ಪತ್ರೆಗಳ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಎಲ್ಲರೂ ಸಮನ್ವಯದಿಂದ ಕೆಲಸ ಮಾಡಲು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ ಎಂದರು.

ಕಾನೂನು ಕ್ರಮ: ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳಪೆ ಪಿಪಿಇ ಕಿಟ್ ನೀಡಲಾಗಿದೆ ಎಂಬ ವರದಿ ಮತ್ತು ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಬಿಸಾಡಲಾಗಿತ್ತು ಎಂಬ ವಿಷಯ ಗಮನಕ್ಕೆ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗೆ ಮುಂದೆ ಇಂತಹ ಘಟನೆ ಮರುಕಳಿಸದಂತೆ ಸೂಚನೆ ನೀಡಲಾಗಿದೆ. ಇಷ್ಟರ ಮೇಲೂ ಅಂತಹ ಪ್ರಕರಣ ಮರುಕಳಿಸಿದರೆ ಎಚ್ಚರಿಕೆ ನೀಡಲಾಗುವುದು. ಆಗಲೂ ಪರಿಸ್ಥಿತಿ ಸರಿಯಾಗದಿದ್ದಲ್ಲಿ ಕಾನೂನು ಮೂಲಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಟಾಸ್ಕ್‌ಫೋರ್ಸ್ ಸಭೆಯಲ್ಲಿ ಲಾಕ್‍ಡೌನ್ ವಿಚಾರವು ಚರ್ಚೆಗೆ ಬಂತು. ಈ ಸನ್ನಿವೇಶದಲ್ಲಿ ಲಾಕ್‍ಡೌನ್ ಬೇಕಿಲ್ಲ ಎಂದು ನಾನು ಮತ್ತು ಡಿಸಿಎಂ ಅಶ್ವತ್ಥನಾರಾಯಣ ಸಿಎಂಗೆ ಹೇಳಿದ್ದೇವೆ. ಈ ಕುರಿತು ಮುಂದೆ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ಸಿಎಂ ಪ್ರಕಟಿಸಿದ್ದಂತೆ ಭಾನುವಾರ ಮತ್ತು ರಾತ್ರಿ ಕಫ್ರ್ಯೂ ಮುಂದಿನ ಆದೇಶದವರೆಗೆ ಮುಂದುವರಿಯಲಿದೆ ಎಂದರು.

ಸಿಎಂ ನೇತೃತ್ವದಲ್ಲಿ ನಡೆದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ, ಸಚಿವರಾದ ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಮತ್ತು ಹಿರಿಯ ಅಧಿಕಾರಿಗಳು ಹಾಜರಿದ್ದರು ಎಂದು ವಿವರಿಸಿದರು.

ಟೆಲಿ ಮೆಡಿಸನ್ ಕಾರ್ಟ್‍ಗೆ ಚಾಲನೆ: ಕಾರ್ಯಕ್ರಮದಲ್ಲಿ ಸಿಸ್ಕೊ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ಅಡಿ ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಡುಗೆ ನೀಡಿರುವ ಟೆಲಿ ಮೆಡಿಸನ್ ಕಾರ್ಟ್‍ಗೆ ಸಚಿವ ಸುಧಾಕರ್ ವಿಧಾನಸೌಧದಲ್ಲಿ ಚಾಲನೆ ನೀಡಿದರು. ಬಳಿಕ ಕೋವಿಡ್-19 ಆಸ್ಪತ್ರೆಯಲ್ಲಿ ಕಳೆದ 7 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿ ಜೊತೆ ಮಾತನಾಡಿ ಎಲ್ಲ ವಿವರ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *