ಸಿಂಧೂರ ಲಕ್ಷ್ಮಣನಾಗಿ ಅಬ್ಬರಿಸಲಿದ್ದಾರೆ ಡಿ ಬಾಸ್

Public TV
2 Min Read

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೌರಾಣಿಕ ಪಾತ್ರಗಳಿಗೆ ಹೇಳಿ ಮಾಡಿಸಿದ ನಟ ಎನ್ನುವಂತಾಗಿದ್ದು, ಅದರಂತೆ ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಸಿನಿಮಾಗಳಲ್ಲಿ ತಮ್ಮ ಖದರ್ ತೋರಿಸಿದ್ದಾರೆ. ಅದೇ ರೀತಿ ರಾಜ ವೀರ ಮದಕರಿ ಸಿನಿಮಾದ ಚಿತ್ರೀಕರಣ ಸಹ ಆರಂಭವಾಗಿದೆ. ಹೀಗಿರುವಾಗಲೇ ಡಿ ಬಾಸ್‍ಗಾಗಿ ಮತ್ತೊಂದು ಐತಿಹಾಸಿಕ ಸಿನಿಮಾ ಸಿದ್ಧವಾಗುತ್ತಿದೆ.

ಹೌದು ರಾಬರ್ಟ್ ಸಿನಿಮಾ ಚಿತ್ರೀಕಣ ಬಹುತೇಕ ಪೂರ್ಣಗೊಂಡಿದ್ದು, ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೇ ಡಿ ಬಾಸ್ ರಾಜ ವೀರ ಮದಕರಿ ನಾಯಕ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಕೇರಳದಲ್ಲಿ ಅಲ್ಪ ಪ್ರಮಾಣದ ಚಿತ್ರೀಕರಣ ಮುಗಿದಿದ್ದು, ಕರ್ನಾಟಕದಲ್ಲಿ ಚಿತ್ರೀಕರಣ ಮುಂದುವರಿಸಬೇಕು ಎನ್ನುವಷ್ಟರಲ್ಲಿ ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಚೀತ್ರೀಕರಣ ಸಂಪೂರ್ಣ ಸ್ಥಗಿತವಾಯಿತು.

ಇತ್ತೀಚೆಗೆ ರಾಜ್ಯ ಸರ್ಕಾರ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿದ್ದು, ಸ್ಯಾಂಡಲ್‍ವುಡ್‍ನಲ್ಲಿ ಶೂಟಿಂಗ್ ಕೆಲಸ ಗರಿಗೆದರಿದೆ. ಹೀಗಾಗಿ ಇನ್ನು ಚಿತ್ರೀಕರಣ ಶುರುವಾಗಲಿದೆ. ಲಾಕ್‍ಡೌನ್ ಮಧ್ಯೆಯೇ ಇದೀಗ ಇನ್ನೊಂದು ವಿಚಾರ ಬಹಿರಂಗವಾಗಿದ್ದು, ಡಿ ಬಾಸ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರಂತೆ. ಈ ಕುರಿತು ದರ್ಶನ್ ಆಸಕ್ತಿ ತೋರಿದ್ದು, ಸಿನಿಮಾ ಮಾಡುವ ಕುರಿತು ಮಾತುಕತೆ ಸಹ ನಡೆಸಿದ್ದಾರಂತೆ.

ಉಮಾಪತಿ ಅವರು ಈಗಾಗಲೇ ಚಿತ್ರ ನಿರ್ಮಿಸುವ ಹಕ್ಕನ್ನು ಪಡೆದಿದ್ದಾರಂತೆ, ಚಿತ್ರ ನಿರ್ಮಿಸುವ ಕುರಿತು ಯೋಜನೆ ಇರುವುದು ನಿಜ. ಆದರೆ ಸದ್ಯ ಈ ಚಿತ್ರ ಸೆಟ್ಟೇರುವುದಿಲ್ಲ. ಏಕೆಂದರೆ ದರ್ಶನ್ ಈಗಾಗಲೇ ಮತ್ತೊಂದು ಐತಿಹಾಸಿಕ ರಾಜ ವೀರ ಮದಕರಿ ನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಈ ಎರಡು ಚಿತ್ರಗಳ ನಡುವೆ ಅಂತರ ನೋಡಿಕೊಂಡು ಸಿನಿಮಾ ಮಾಡಲಾಗುವುದು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ತಾರಕ್ ಬಳಿಕ ಮಿಲನ ಸಿನಿಮಾ ಖ್ಯಾತಿಯ ಪ್ರಕಾಶ್, ಡಿ ಬಾಸ್‍ಗೆ ಮತ್ತೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಅಲ್ಲದೆ ರಾಜ ವೀರ ಮದಕರಿ ನಾಯಕ ಸಿನಿಮಾ ನಂತರ ದರ್ಶನ್ ಈ ಚಿತ್ರದಲ್ಲಿ ನಟೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಿಂಧೂರ ಲಕ್ಷ್ಮಣ ರಾಜ್ಯದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಈಗಾಗಲೇ ಸಂಗೊಳ್ಳಿ ರಾಯಣ್ಣನಾಗಿ ತಮ್ಮ ಅಬ್ಬರಿಸಿರುವ ಡಿ ಬಾಸ್, ಇದೀಗ ಸಿಂಧೂರ ಲಕ್ಷ್ಮಣನಾಗಿ ಘರ್ಜಿಸಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಚಿತ್ರ ಯಾವ ರೀತಿ ಸಿದ್ಧವಾಗಲಿದೆ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *