ಸಿಂಧನೂರು ಕಲಾವಿದನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಂಸೆ

Public TV
1 Min Read

ರಾಯಚೂರು: ಕೊರೊನಾ ಲಾಕ್‍ಡೌನ್ ಬಳಿಕ ಸಾಕಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಕೆಲವರು ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿ ಸೃಜನಾತ್ಮಕತೆಯಿಂದ ಹೊರಹೊಮ್ಮಿದ್ದಾರೆ. ರಾಯಚೂರಿನ ಸಿಂಧನೂರಿನ ಯುವ ಕಲಾವಿದ ಉಮೇಶ್ ಪತ್ತಾರ್ ತಮ್ಮ ಚಿತ್ರ ಕಲೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಪ್ರಶಂಸೆ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಎ4 ಸೈಜ್‍ನ ಹಾಳೆಯಲ್ಲಿ ಕಪ್ಪು ಮಸಿ ಪೆನ್ನಿನಿಂದ ಜರ್ಮನ್ ಶೈಲಿಯ ಬುಡಕಟ್ಟು ಜನಾಂಗದ 548 ಜನಪದ ಚಿತ್ರಗಳನ್ನು ಬಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಈ ಚಿತ್ರಗಳು ಒಂದೊಂದು ಜನಾಂಗದ ಇತಿಹಾಸ, ಪರಿಚಯ, ಅವರ ಕಲೆಯ ಕುರಿತು ಬಿಂಬಿಸುತ್ತವೆ. ಚಿತ್ರಗಳನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗಾಗಿ ಇ-ಮೇಲ್ ಮುಖಾಂತರ ಕಳುಹಿಸಿದ್ದು, ಇವರ ಕಲಾಕೃತಿಯನ್ನು ವಿಶೇಷ ಕಲೆಯೆಂದು ದಾಖಲು ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಲಿಮ್ಕಾ, ಗಿನ್ನಿಸ್ ದಾಖಲೆಗಾಗಿ ವಿಶೇಷ ಚಿತ್ರಗಳನ್ನು ಬರೆಯುವುದಾಗಿ ಉಮೇಶ ಪತ್ತಾರ್ ಹೇಳಿದ್ದಾರೆ.

ಲಾಕ್‍ಡೌನ್ ಸಂದರ್ಭದಲ್ಲಿ ಉಮೇಶ ಅವರು ಸೃಜನಾತ್ಮಕ ಕಲೆಗೆ ಒತ್ತು ಕೊಟ್ಟಿದ್ದರಿಂದ ಈ ಕಲಾಕೃತಿ ಹೊರಹೊಮ್ಮಿದೆ. 2006 ರಿಂದಲೂ ಅವರು ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇವರ ಕಲಾಪ್ರದರ್ಶನಗಳು ಹಲವು ಕಡೆ ಪ್ರದರ್ಶನಗೊಂಡಿವೆ. ಇವರ ಕಲೆಯ ಸಾಧನೆಯನ್ನು ಗುರುತಿಸಿ ಈಗಾಗಲೇ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಕಲೆಯನ್ನು ಮುಂದುವರಿಸಿದ ಉಮೇಶ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯ ಆಸೆ ಹೊಂದಿದ್ದು, ನಿರಂತರ ಪ್ರಯತ್ನ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *