‘ಸಿಂಗಂ’ಅಂತೆ ಆಗಬೇಡಿ- ಯುವ ಐಪಿಎಸ್ ಅಧಿಕಾರಿಗಳಿಗೆ ಮೋದಿ ಸಂದೇಶ

Public TV
3 Min Read

ಹೈದರಾಬಾದ್: ‘ಸಿಂಗಂ’ ನಂತಹ ಸಿನಿಮಾಗಳನ್ನು ನೋಡಿ ನಾವು ಎಲ್ಲರಿಗಿಂತ ಹೆಚ್ಚು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಡಿ ಎಂದು ಯುವ ಐಪಿಎಸ್ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಹೈದರಾಬಾದ್‍ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಐಪಿಎಸ್ ಪ್ರೊಬೆಷನರ್ ಗಳ ‘ದೀಕ್ಷಾಂತ್ ಪೆರೇಡ್’ ಸಂದರ್ಭದಲ್ಲಿ ಪಿಎಂ ಮೋದಿ ಯುವ ಐಪಿಎಸ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಯುವ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಜನರ ನಂಬಿಕೆಯನ್ನು ಗೆಲ್ಲುವುದು ಹೇಗೆ ಎಂಬ ಬಗ್ಗೆ ಸಲಹೆಗಳನ್ನು ನೀಡಿದರು.

ಪೊಲೀಸ್ ಅಧಿಕಾರಿಗಳು ಮೊದಲು ತಾವು ಕರ್ತವ್ಯದಲ್ಲಿ ಸೇರ್ಪಡೆಯಾದ ಸಂದರ್ಭದಲ್ಲಿ ಎಲ್ಲರೂ ತಮಗೆ ಭಯ ಪಡೆಬೇಕು ಎಂದುಕೊಳ್ಳುತ್ತಾರೆ. ಪ್ರಮುಖವಾಗಿ ಗ್ಯಾಂಗ್‍ಸ್ಟಾರ್, ಕಾನೂನು ಬಾಹಿರ ಕೃತ್ಯ ನಡೆಸುವವರು ತಮ್ಮನ್ನು ನೋಡಿ ಭಯ ಪಡೆಬೇಕು ಎಂದು ಭಾವಿಸುತ್ತಾರೆ. ಇದರಿಂದ ಅತ್ಯುತ್ತಮ ಕೆಲಸಗಳನ್ನು ನಿರ್ಲಕ್ಷಿಸುವ ಅವಕಾಶವಿದೆ. ಇದರಿಂದ ಜನರ ಮನಸ್ಸಿನಲ್ಲಿ ಪೊಲೀಸ್ ಪಡೆಯ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಸೃಷ್ಟಿಸುತ್ತದೆ ಎಂದು ಮೋದಿ ಎಚ್ಚರಿಕೆಯ ಸಲಹೆಯನ್ನು ನೀಡಿದರು.

ನಿಮ್ಮ ಸಮವಸ್ತ್ರ ನೋಡಿದರೆ ನಿಮಗೆ ಹೆಮ್ಮೆ ಎನಿಸಬೇಕೆ ವಿನಾಃ ಆ ಸಮವಸ್ತ್ರಕ್ಕಿರುವ ಅಧಿಕಾರವನ್ನು ನೋಡಿ ಅಲ್ಲ. ಖಾಕಿ ಸಮವಸ್ತ್ರಕ್ಕಿರುವ ಹೆಮ್ಮೆಯನ್ನು ಎಂದು ಕಳೆದುಕೊಳ್ಳಬಾರದು. ಯುವ ಅಧಿಕಾರಿಗಳು ಸಾಮಾನ್ಯ ಜನರ ದೃಷ್ಟಿಯಲ್ಲಿ ಪೊಲೀಸರ ಚಿತ್ರಣ ಬದಲಾಗುವಂತೆ ನೋಡಿಕೊಳ್ಳಬೇಕು. ಜನರು ಪೊಲೀಸ್ ಇಲಾಖೆಯ ಮಾನವ ಮುಖವನ್ನು ನೋಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಗೌರವವನ್ನು ಆಧರಿಸಿ ಸಂಬಂಧವನ್ನು ಬೆಳೆಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಜನರೊಂದಿಗೆ ಪ್ರೀತಿಯ ಸೇತುವೆಯನ್ನು ನಿರ್ಮಿಸಿ. ನೀವು ನಿವೃತ್ತಿಯಾದ ಬಳಿಕವೂ ಜನರು ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ. ನಮ್ಮ ಸಮಯದಲ್ಲಿ ಅತ್ಯುತ್ತಮ ಅಧಿಕಾರಿಯೊಬ್ಬರು ಹೇಳುತ್ತಾರೆ. ಒಮ್ಮೆ ನೀವು ಜನರ ಮನಸ್ಸನ್ನು ಗೆದ್ದರೆ ಎಲ್ಲವೂ ಬದಲಾಗುತ್ತದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *