ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗಲ್ಲ: ಶಿವಣ್ಣ

Public TV
2 Min Read

ಬೆಂಗಳೂರು: ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಆಗಲೇ ನಾಯಕ ಆಗಲು ಸಾಧ್ಯ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ಕೊರೊನಾ ಹಾಗೂ ಲಾಕ್‍ಡೌನ್‍ನಿಂದಾಗಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಶಿವರಾಜ್ ಕುಮಾರ್ ಮನೆಯಲ್ಲಿ ಸಭೆ ನಡೆಸಲಾಯಿತು. ನಾಗಾವರದ ಶಿವರಾಜ್ ಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಅದರ ಸಂಸ್ಥೆಗಳು ಹಾಗೂ ಅದರ ಅಂಗ ಸಂಸ್ಥೆಗಳು ಭಾಗಿಯಾಗಿದ್ದವು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಚಿತ್ರರಂಗದ ಎಲ್ಲ ವಿಭಾಗಗಳಿಂದ ಒಗ್ಗಟ್ಟಾಗಿ ಬಂದಿರುವುದು ಖುಷಿ ತಂದಿದೆ. ಇಂಡಸ್ಟ್ರಿಯ ಸಾಕಷ್ಟು ಸಮಸ್ಯೆಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ನನ್ನನ್ನು ಕಂಡರೆ ಎಲ್ಲರೂ ಇಷ್ಟಪಡುತ್ತಾರೆ. ನಾವೆಲ್ಲರೂ ಒಗ್ಗಟ್ಟಾಗಿ ಹೋಗೋಣ. ಮಾದರಿ ಇಂಡಸ್ಟ್ರಿಯಾಗಿ ಬಾಳೋಣ ಎಂದರು ಕರೆ ನೀಡಿದರು.

ಕೊರೊನಾ ಏನೂ ದೊಡ್ಡ ವಿಷಯವಲ್ಲ, ಅದನ್ನು ಹೋಗಲಾಡಿಸಬಹುದು. ಮೂರು, ನಾಲ್ಕು ದಿನಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಿ, ಅದರಲ್ಲಿ ರಾಜ್ಯ ಸರ್ಕಾರಕ್ಕೆ ಯಾವ ರೀತಿ ಮನವಿ ಸಲ್ಲಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ನನಗೆ ಯಾವ ನಾಯಕತ್ವವೂ ಮುಖ್ಯವಲ್ಲ, ಎಲ್ಲರ ಜೊತೆಯಲ್ಲಿ ಹೋಗುತ್ತೇನೆ. ಸರ್ಕಾರದ ಬಳಿ ಹೋಗಲು ಎಲ್ಲರೂ ತೀರ್ಮಾನ ಮಾಡಿದ್ದಾರೆ. ಸರ್ಕಾರದ ಮುಂದೆ ಹೋಗುವ ಮುನ್ನ ನಾವು ಏನು ಮಾಡಿದ್ದೇವೆ ಎಂಬುದನ್ನು ತಿಳಿಯಬೇಕಿದೆ. ಸರ್ಕಾರದ ಮುಂದೆ ಹೋಗೋದು ಮುಖ್ಯವಲ್ಲ, ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ. ಟೀಮ್ ಕೆಲಸ ಆದ ಮೇಲೆ ಮುಂದುವರಿಯುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.

ಯಾರೂ ಧೈರ್ಯ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಸೂಕ್ತ ಪರಿಹಾರ ಮಾಡಲಾಗುತ್ತದೆ. ತಕ್ಷಣವೇ ಎಲ್ಲವೂ ಸರಿ ಹೋಗುತ್ತೆ ಅಂತ ಹೇಳಲು ಆಗುವುದಿಲ್ಲ. ಅದಕ್ಕೆ ಸಮಯ ಬೇಕು, ನಿಮ್ಮ ಜೊತೆ ನಾನು ಇದ್ದೇನೆ. ಎಲ್ಲರೂ ಧೈರ್ಯವಾಗಿರಿ ಎಂದು ಕಾರ್ಮಿಕರಿಗೆ ಶಿವರಾಜ್ ಕುಮಾರ್ ಧೈರ್ಯ ತುಂಬಿದರು.

ನಿರ್ಮಾಪಕ ಸಾ.ರಾ.ಗೋವಿಂದು ಮಾತನಾಡಿ, ಸಧ್ಯದಲ್ಲೇ ಮುಖ್ಯಮಂತ್ರಿಗಳ ಭೇಟಿಯಾಗುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಚಿತ್ರರಂಗದ ಉಳಿವಿಗಾಗಿ ಮುಖ್ಯಮಂತ್ರಿ ಬಳಿ ಮನವಿ ಮಾಡುತ್ತೇವೆ ಎಂದರು.

ಕೊರೊನಾ ಸಮಯದಲ್ಲಿ ಚಿತ್ರರಂಗ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಎಲ್ಲ ರಂಗಕ್ಕೂ ಪ್ಯಾಕೆಜ್ ಘೋಷಿಸಿರೋ ಸರ್ಕಾರ, ಚಿತ್ರರಂಗದ ಬಗ್ಗೆ ನಿರ್ಲಕ್ಷ ವಹಿಸಿದೆ. ಹೀಗಾಗಿ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನಿಡಲು ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

ಸಭೆಯಲ್ಲಿ ಸಾಧುಕೋಕಿಲ, ಜಯಣ್ಣ, ಸೂರಪ್ಪ ಬಾಬು, ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಸಾರಾ ಗೋವಿಂದು, ಕೆ.ಮಂಜು, ಗುರುಕಿರಣ್, ಭೋಗೇಂದ್ರ, ಸುರೇಶ್ ಕುಮಾರ್, ಭಾಮ ಹರೀಶ್, ಎ.ಗಣೇಶ್, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕೋಟಿ ರಾಮು, ನಿರ್ಮಾಪಕ ವಿತರಕ ಚಿನ್ನೇಗೌಡ, ಕಾರ್ತಿಕ್ ಗೌಡ, ಛಾಯಾಗ್ರಾಹಕ ಸಂಘದ ಅದ್ಯಕ್ಷ ಜೆ.ಜೆ.ಕೃಷ್ಣ, ನಿರ್ಮಾಪಕ ಕೆಪಿ ಹಾಗೂ ಇತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *