ಸಾವಿನ ದುಃಖದಲ್ಲೂ ಕೋವಿಡ್ ಆಸ್ಪತ್ರೆ ಪ್ರಾರಂಭಿಸಿ ನೊಂದವರ ಕಣ್ಣೀರೊರೆಸಲು ಮುಂದಾದ ಡಿಸಿಎಂ ಸವದಿ

Public TV
2 Min Read

ಬೆಳಗಾವಿ: ನಿನ್ನೆಯಷ್ಟೇ ತಮ್ಮ ಸ್ವಂತ ಸಹೋದರನ ಪುತ್ರ ಕೊರೊನಾದಿಂದ ಮೃತಪಟ್ಟಿದ್ದರು. ಈ ದುಃಖ ಇಡೀ ಕುಟುಂಬದಲ್ಲಿ ಮಡುಗಟ್ಟಿದ್ದರೂ ಸಹ ಆ ನೋವನ್ನು ತಾವೇ ನುಂಗಿಕೊಂಡು, ತಮ್ಮ ಅಣ್ಣನ ಮಗನಿಗೆ ಉಂಟಾದ ಪರಿಸ್ಥಿತಿ ಬೇರೆಯವರಿಗೆ ಬರಬಾರದು ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರು ಇಂದೇ ಕಾರ್ಯಪ್ರವೃತ್ತರಾಗಿ ಅಥಣಿಯಲ್ಲಿ ಆಕ್ಸಿಜನ್ ಸೆಂಟರ್ ಮತ್ತು ಕೋವಿಡ್ ಚಿಕಿತ್ಸಾ ಆಸ್ಪತ್ರೆಯನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದು, ನಾಳೆಯಿಂದಲೇ ಈ ಆಸ್ಪತ್ರೆಯು ಬಡವರ ಸೇವೆಗೆ ಲಭ್ಯವಾಗುತ್ತಿದೆ.

ನಿನ್ನೆಯಷ್ಟೇ ಕೊರೊನಾ ಸೋಂಕಿನಿಂದಾಗಿ ಸವದಿಯವರ ಸಹೋದರನ ಮಗ ವಿನೋದ್ ಸವದಿ ಅವರು ಮೃತಪಟ್ಟಿದ್ದರು. ಕುಟುಂಬದಲ್ಲಿ ಸಾವು ಸಂಭವಿಸಿ ನೋವು ತಮ್ಮ ಹೃದಯದಲ್ಲಿ ಬೆಟ್ಟದಷ್ಟಿದ್ದರೂ, ಈ ರೀತಿ ಜನಪರ ಕೆಲಸ ಕೈಗೊಂಡು ಮಾದರಿಯಾಗುವ ನಿಟ್ಟಿನಲ್ಲಿ ಸುಮಾರು 50 ಲಕ್ಷ ರೂಪಾಯಿ ವೆಚ್ಚ ಮಾಡಿ ತಮ್ಮ ಖರ್ಚಿನಲ್ಲಿಯೇ ಈ ಆರೋಗ್ಯ ಸೇವೆಯನ್ನು ಕಲ್ಪಿಸುವ ಮೂಲಕ ನಿಧನಹೊಂದಿದ ತಮ್ಮ ಕುಟುಂಬದ ಕುಡಿಗೆ ಜನಸೇವೆಯ ಮೂಲಕವೇ ಅಶ್ರುತರ್ಪಣ ಸಲ್ಲಿಸಲು ಮುಂದಾಗಿದ್ದಾರೆ.

ಸವದಿ ಅವರ ಈ ಕಾಳಜಿಯಿಂದಾಗಿ ಅಥಣಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಸತಿ ಶಾಲೆಯಲ್ಲಿ ಸುಮಾರು 60 ಹಾಸಿಗೆಗಳುಳ್ಳ ಉಚಿತ ಕೋವಿಡ್ ಕೇರ್ ಸೆಂಟರ್ ನಾಳೆಯಿಂದ ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ಕೊರೊನ ಮಹಾಮಾರಿಯಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಆಕ್ಸಿಜನ್ ಸಿಗದೆ ತೊಂದರೆಗೀಡಾಗಿರುವಂತವರಿಗೆ 10 ಲೀಟರ್ ಹಾಗೂ 15 ಲೀಟರ್ ಸಾಮರ್ಥ್ಯವುಳ್ಳ 50 ಆಕ್ಸಿಜನ್ ಕಾನ್ಸಟ್ರೇಟರ್ ಗಳನ್ನು ಈಗಾಗಲೇ ಖರೀದಿಸಿ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

ಆಕ್ಸಿಜನ್ ಕಾನ್ಸಟ್ರೇಟರ್ ಕಿಟ್ ಜೊತೆಗೆ ಜ್ವರ ಪರೀಕ್ಷೆ ಮಾಡುವ ಥರ್ಮಾಮೀಟರ್, ಸ್ಯಾಚುರೇಷನ್ ಹಾಗೂ ಪಲ್ಸ್ ಚೆಕ್ ಮಾಡುವ ಆಕ್ಸಿಮೀಟರ್ ಉಳ್ಳ ಕಿಟ್ ಗಳನ್ನು ಕೂಡ ನೀಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಉಚಿತ ಸೇವೆ ಕಲ್ಪಿಸುವುದರಿಂದ ವಿಶೇಷವಾಗಿ ಬಡವರು ಇದರ ಪ್ರಯೋಜನ ಪಡೆದುಕೊಳ್ಳುವಂತಾದರೆ ತಮ್ಮ ಶ್ರಮ ಸಾರ್ಥಕ. ಜನರ ನೋವು ನೀಗಿಸಲು ನಾವು ಪ್ರಯತ್ನಿಸಿದರೆ, ನಮ್ಮಲ್ಲಿನ ನೋವನ್ನು ಆ ಭಗವಂತನೇ ಪರಿಹರಿಸುತ್ತಾನೆ ಎಂಬುದಾಗಿ ಸವದಿ ಅವರು ಪ್ರತಿಕ್ರಿಯಿಸಿದ್ದಾರೆ.

ಕೊರೊನಾ ಬಂದಿದೆ ಎಂದು ಉದಾಸೀನತೆ ತೋರದೆ ಕೂಡಲೇ ಚಿಕಿತ್ಸೆ ಪಡೆಯಬೇಕು. ಯಾರೂ ಧೈರ್ಯಗೆಡಬಾರದು, ಜನತೆ ತಮ್ಮ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಸವದಿ ಅವರು ಕಿವಿಮಾತು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *