ಸಾರಿಗೆ ಮುಷ್ಕರವನ್ನ ಹಿಂಸಾತ್ಮಕ ಹಂತಕ್ಕೆ ಬೆಳೆಯಲು ಬಿಟ್ಟಿದ್ದು ಸರ್ಕಾರದ ಬೇಜವಾಬ್ದಾರಿತನ: ಹೆಚ್‍ಡಿಕೆ

Public TV
1 Min Read

– ಪ್ರತಿಭಟನೆ ಎತ್ತ ಸಾಗುತ್ತಿದೆ? ಸರ್ಕಾರ ಏನು ಮಾಡುತ್ತಿದೆ?

ಬೆಂಗಳೂರು: ಸಾರಿಗೆ ಮುಷ್ಕರವನ್ನ ಹಿಂಸಾತ್ಮಕ ಹಂತಕ್ಕೆ ಬೆಳೆಯಲು ಬಿಟ್ಟಿದ್ದು ಸರ್ಕಾರದ ಬೇಜವಾಬ್ದಾರಿತನ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಷ್ಕರ ಲೆಕ್ಕಿಸದೇ, ಜನರ ಸೇವೆಗಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ವಾಯವ್ಯ ಸಾರಿಗೆ ಸಂಸ್ಥೆ ಬಸ್ ಚಾಲಕ ನಬಿ ರಸೂಲ್ ಆವಟಿ ಅವರನ್ನು ಜಮಖಂಡಿಯಲ್ಲಿ ಕಲ್ಲಿನಿಂದ ಹೊಡೆದು ಕೊಂದ ಘಟನೆ ನನ್ನನು ದಿಗ್ಭ್ರಾಂತನನ್ನಾಗಿಸಿದೆ. ಪ್ರತಿಭಟನೆ ಎತ್ತ ಸಾಗುತ್ತಿದೆ? ಸರ್ಕಾರ ಏನು ಮಾಡುತ್ತಿದೆ ? ಎಂಬ ಪ್ರಶ್ನೆಗಳು ನನ್ನನ್ನು ತೀವ್ರವಾಗಿ ಕಾಡಿವೆ.

ಜಮಖಂಡಿಯ ಈ ದುರ್ಘಟನೆ ಯಾವ ಸಂದೇಶ ನೀಡುತ್ತಿದೆ ಎಂಬುದರತ್ತ ಸರ್ಕಾರ ಗಂಭೀರವಾಗಿ ಯೋಚಿಸಲಿ. ಅನಿವಾರ್ಯ ಸಂದರ್ಭದಲ್ಲಿ ಜನರಿಗೆ ಸೇವೆ ನೀಡಲು ಇನ್ನು ಮುಂದೆ ಯಾವ ನೌಕರ ಮುಂದೆ ಬರುತ್ತಾನೆ ಎಂಬುದರ ಚಿಂತನೆ ಮಾಡಲಿ. ಮುಷ್ಕರವನ್ನು ಹಿಂಸಾತ್ಮಕ ಹಂತಕ್ಕೆ ಬೆಳೆಯಲು ಬಿಟ್ಟ ಸರ್ಕಾರದ ನಡೆಯಲ್ಲಿ ಬೇಜವಾಬ್ದಾರಿತನ ಸ್ಪಷ್ಟವಾಗಿ ಕಾಣಿಸುತ್ತಿದೆ.

ಜಮಖಂಡಿ ದುರ್ಘಟನೆಯಲ್ಲಿ ಮೃತಪಟ್ಟ ಚಾಲಕ ನಬಿ ರಸೂಲ್ ಸರ್ಕಾರದ ಕರೆಗೆ ಓಗೊಟ್ಟು ಕರ್ತವ್ಯಕ್ಕೆ ಬಂದಿದ್ದವರು. ಹೀಗಾಗಿ ಅವರ ಕುಟುಂಬಕ್ಕೆ ಸರ್ಕಾರ ಗರಿಷ್ಠ ಪರಿಹಾರ ಒದಗಿಸಬೇಕು. ಕೃತ್ಯವೆಸಗಿದವರಿಗೆ ಶಿಕ್ಷೆ ಕೊಡಿಸಬೇಕು. ನೌಕರರ ಬೇಡಿಕೆ ಒಂದು ಕಡೆ ಇರಲಿ. ಅದಕ್ಕೂ ಮೊದಲು ನೌಕರರಲ್ಲು ಈಗ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿಸುವ ಅಗತ್ಯವಿದೆ. ಇದನ್ನೂ ಓದಿ: ಸಾರಿಗೆ ಮುಷ್ಕರ- ಕಿಡಿಗೇಡಿಗಳಿಂದ ಕಲ್ಲು ತೂರಾಟ, ಬಸ್ ಚಾಲಕ ದುರ್ಮರಣ

ಬಸ್ ಗಳ ಮೇಲೆ ದಾಳಿ ನಡೆಯುತ್ತಿರುವ ಪ್ರಸಂಗಗಳನ್ನು ಗಮನಿಸಿದ್ದೇನೆ. ಅಂಥವರನ್ನು ಕೂಡಲೇ ಬಂಧಿಸಬೇಕು. ನೌಕರರು ಈ ಕೃತ್ಯ ಮಾಡಿರಲಾರರು. ನೌಕರರ ಹೋರಾಟ ಸರ್ಕಾರದ ವಿರುದ್ಧವೇ ಹೊರತು, ಅನ್ನ ನೀಡುವ ಬಸ್ ಗಳ ವಿರುದ್ಧ ಅಲ್ಲ ಎಂಬ ನಂಬಿಕೆ ನನಗಿದೆ. ಮುಷ್ಕರ ಹಿಂಸೆ ರೂಪ ಪಡೆಯಬಾರದು. ಇಲ್ಲಿ ಯಾರ ಹಟವೂ ಗೆಲ್ಲದಿರಲಿ. ನಾಗರಿಕರಿಗೆ ಹಿತವಾಗಲಿ ಎಂದು ಹೇಳಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *