ಹಾವೇರಿ: ಬ್ರೇಕ್ ಫೇಲ್ ಆಗಿ ಕೆಎಸ್‍ಆರ್ ಟಿಸಿ ಬಸ್ ಪಲ್ಟಿಯಾದ ಪರಿಣಾಮ 35 ಪ್ರಯಾಣಿಕರಿಗೆ ಗಾಯಗಳಾದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿ ನಡೆದಿದೆ.
ಛತ್ರ ಗ್ರಾಮದ ಬಳಿ ಇರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ದುರ್ಘಟನೆ ನಡೆದಿದೆ. ಗಾಯಗೊಂಡಿರುವ 35 ಪ್ರಯಾಣಿಕರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಬುಲೆನ್ಸ್ ಇಲ್ಲದೆ ಗಾಯಾಳುಗಳು ಕೆಲಕಾಲ ಪರದಾಡುವ ಪರಸ್ಥಿತಿ ನಿರ್ಮಾಣವಾಗಿತ್ತು. ಬ್ಯಾಡಗಿ ಡಿಪೋಗೆ ಸೇರಿದ ಬಸ್ ಆಗಿದ್ದು, ಗದಗನಿಂದ ರಾಣೆಬೆನ್ನೂರಿಗೆ ತೆರಳುತ್ತಿದ್ದ ವೇಳೆ ಬಸ್ ಬ್ರೇಕ್ ಫೇಲ್ ಆಗಿ ಈ ದುರ್ಘಟನೆ ಸಂಭವಿಸಿದೆ.
ಬಸ್ ನಲ್ಲಿ ದೊಡ್ಡದಾಗಿ ಶಬ್ದ ಬಂದ ಕೂಡಲೇ ಚಾಲಕ ಬಸ್ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಬ್ರೇಕ್ ಫೇಲ್ ಆಗಿದ್ದು, ತಿಳಿದು ನಿಲ್ಲಿಸಲು ಪ್ರಯತ್ನಿಸಿದಾಗ ಬಸ್ ರಸ್ತೆಯ ಪಕ್ಕಕ್ಕೆ ಪಲ್ಟಿಯಾಗಿದೆ. ವಿಷಯಗಳ ತಿಳಿಯುತ್ತಿದ್ದಂತೆ ಬ್ಯಾಡಗಿ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.