ಸಾರಿಗೆ ಇಲಾಖೆ ಸಿಬ್ಬಂದಿಗೆ ಸಂಬಳವಿಲ್ಲ- ಕೆಲಸಕ್ಕೆ ಬಂದರೂ ರಜೆ ಹಾಕಲೇಬೇಕಂತೆ

Public TV
2 Min Read

ರಾಯಚೂರು: ಕೊರೊನಾ ಲಾಕ್‍ಡೌನ್ ಎಫೆಕ್ಟ್ ನಿಂದ ರಾಯಚೂರು ಸೇರಿದಂತೆ ಎಲ್ಲೆಡೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಹೊಸ ಹೊಸ ತೊಂದರೆಗಳು ಶುರುವಾಗಿವೆ. ಒಂದೆಡೆ ಸಂಬಳವಿಲ್ಲ, ಇನ್ನೊಂದೆಡೆ ರಜೆಗಳ ಹರಣ, ಮತ್ತೊಂದೆಡೆ ಕೆಲಸವೂ ಇಲ್ಲಾ. ಒಟ್ಟಿನಲ್ಲಿ ಎಲ್ಲರದ್ದೂ ಒಂದು ತರದ ಕಷ್ಟ. ಆದ್ರೆ ಸಾರಿಗೆ ಸಿಬ್ಬಂದಿ ಬೇರೆ ತೆರನಾದ ಕಷ್ಟ ಎದುರಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ವತಃ ಸಾರಿಗೆ ಸಚಿವರಾಗಿದ್ದರೂ ಸಿಬ್ಬಂದಿ ಕಷ್ಟ ಕೇಳುವವರಿಲ್ಲದಂತಾಗಿದೆ ಅಂತ ಸಾರಿಗೆ ಇಲಾಖೆ ನೌಕರರು ಅಸಮಧಾನಗೊಂಡಿದ್ದಾರೆ.

ಕೊರೊನಾ ಸೋಂಕು ಹರಡುವಿಕೆ ತಡೆಯಲು ಮೊದಲ ಲಾಕ್ ಡೌನ್ ಆರಂಭವಾದಾಗಿನಿಂದ ರಾಯಚೂರಿನ ಕೆಎಸ್ ಆರ್ ಟಿ ಸಿ ಸಿಬ್ಬಂದಿ ಎಲ್ಲರಂತೆ ಒಂದಿಲ್ಲೊಂದು ತೊಂದರೆಗಳನ್ನ ಅನುಭವಿಸುತ್ತಿದ್ದಾರೆ. ಆದ್ರೆ ಈಗ ಸಾರಿಗೆ ಇಲಾಖೆಯ ಚಾಲಕ ಹಾಗೂ ನಿರ್ವಾಹಕರು ಹೊಸ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ಪ್ರತಿ ತಿಂಗಳು ಸರಿಯಾಗಿ ಸಂಬಳ ಬರುತ್ತಿಲ್ಲ. ಕೆಲಸಕ್ಕೆ ಹೋದರು ರಜೆ ಹಾಕಬೇಕಾಗಿದೆ. ಪ್ರತಿ ಮಾರ್ಗದ ಸಿಬ್ಬಂದಿಗೆ ಆರು ದಿನ ಕೆಲಸ ಆರು ದಿನ ರಜೆ ನೀಡಲಾಗುತ್ತಿದೆ. ಆದ್ರೆ ಬಸ್ ಗಳನ್ನ ಓಡಿಸದ ದಿನಗಳ ರಜೆಯನ್ನು ರಜೆಯಂದು ಪರಿಗಣಿಸಲು ಸಿಬ್ಬಂದಿಯ ಸಾಮಾನ್ಯ ರಜೆ, ಗಳಿಕೆ ರಜೆ , ವೈದ್ಯಕೀಯ ರಜೆಗಳನ್ನ ಬಳಸಿಕೊಳ್ಳಲಾಗುತ್ತಿದೆ. ಹೆಚ್ಚುವರಿ ರಜೆಗೆ ಮುಂದಿನ ಅವಧಿಯ ರಜೆಯನ್ನು ಮಂಜೂರು ಮಾಡಲಾಗುತ್ತಿದೆ. ಇದರಿಂದ ಕೆಲಸಕ್ಕೆ ಬಂದರೂ ಸಿಬ್ಬಂದಿ ತಮ್ಮ ರಜೆಯನ್ನ ಕಳೆದುಕೊಳ್ಳುತ್ತಿದ್ದಾರೆ. ಲಾಕ್‍ಡೌನ್ ಬಳಿಕ ಬೇಕಾಗಿರುವ ರಜೆಗಳಿಗೆ ತಮ್ಮ ವೇತನವನ್ನು ಸಿಬ್ಬಂದಿ ಕಳೆದುಕೊಳ್ಳಬೇಕಾಗಿದೆ. ಇನ್ನೊಂದೆಡೆ ಸಂಬಳವೇ ಸರಿಯಾಗಿ ಬರುತ್ತಿಲ್ಲ.

ಕೊರೊನಾ ಲಾಕ್‍ಡೌನ್ ಆರಂಭವಾದಾಗಿನಿಂದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸೇರಿದಂತೆ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡುತ್ತಿಲ್ಲ. ಒಂದು ತಿಂಗಳು, ಎರಡು ತಿಂಗಳು ವಿಳಂಬ ಮಾಡುತ್ತಿದ್ದಾರೆ. ಜೂನ್ ತಿಂಗಳ ಸಂಬಳವನ್ನೇ ನೀಡಿಲ್ಲ. ನಮ್ಮ ರಜೆಗಳನ್ನು ಸಹ ಹಾಳು ಮಾಡುತ್ತಿದ್ದಾರೆ ಜೀವನ ನಡೆಸುವುದೇ ಕಷ್ಟವಾಗಿದೆ. ಇದರಿಂದ ನಮ್ಮ ಬದುಕು ಕೂಲಿ ಕೆಲಸ ಮಾಡುವವರಿಗಿಂತಲೂ ಕಷ್ಟವಾಗಿದೆ. ಮನೆ ಸಂಸಾರ ನಡೆಸಲು ಕಷ್ಟ, ಬಾಡಿಗೆ ಕಟ್ಟಲು ಕಷ್ಟವಿದೆ ಅಂತ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಸಿದ್ದರಿದ್ದರೂ ಕೊರೊನಾ ಹಿನ್ನೆಲೆ ಬಸ್ ಓಡಾಟ ಕಡಿತವಾಗಿದ್ದು, ಸಿಬ್ಬಂದಿ ಸಂಬಳ ಹಾಗೂ ರಜೆ ಎರಡಕ್ಕೂ ಕತ್ತರಿ ಬಿದ್ದಿದೆ. ಬಸ್ ಓಡಾಟ ಇಲ್ಲದೆ ಸಾರಿಗೆ ಸಂಸ್ಥೆಗಳು ಭಾರೀ ನಷ್ಟದಲ್ಲಿ ಇರುವುದೇನೋ ನಿಜ ಆದ್ರೆ ಸಿಬ್ಬಂದಿಗಳ ಸಂಕಷ್ಟಕ್ಕೆ ಸರ್ಕಾರ ಹಾಗೂ ಸಾರಿಗೆ ಸಚಿವರು ಸ್ಪಂದಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *