ಸಾಂಸ್ಕೃತಿಕ ಸಮಿತಿಯನ್ನು ರದ್ದುಗೊಳಿಸಿ – 32 ಸಂಸದರಿಂದ ರಾಷ್ಟ್ರಪತಿಗೆ ಪತ್ರ

Public TV
2 Min Read

– ದಕ್ಷಿಣ ಭಾರತದವರಿಗೆ ಸ್ಥಾನ ಇಲ್ಲ

ನವದೆಹಲಿ: ಕೇಂದ್ರ ಸಾಂಸ್ಕೃತಿಕ ಸಮಿತಿಯಲ್ಲಿ ದಕ್ಷಿಣ ಭಾರತದವರಿಗೆ ಸ್ಥಾನ ಇಲ್ಲ. ಹೀಗಾಗಿ ಇದನ್ನು ರದ್ದು ಮಾಡಬೇಕು ಎಂದು 32 ಸಂಸದರು ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದಾರೆ.

ಭಾರತದ 12 ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ 16 ಸದಸ್ಯರ ತಜ್ಞರ ಸಮಿತಿ ರಚಿಸಿದೆ. ಆದರೆ ಈ ಸಮಿತಿಯಲ್ಲಿ ಒಬ್ಬರು ಮಹಿಳೆಯರು ಹಾಗೂ ದಕ್ಷಿಣ ಭಾರತದವರನ್ನು ನೇಮಿಸದ್ದಕ್ಕೆ ವಿರೋಧ ವ್ಯಕ್ತವಾಗಿದೆ.

ಈಗ ಇದನ್ನು ವಿರೋಧಿಸಿ ರಾಷ್ಟ್ರಪತಿ ರಾಮನಾಥ್ ಕೋವಿದ್ ಅವರಿಗೆ ಪತ್ರ ಬರೆದಿರುವ ಸಂಸದರು, ಕೇಂದ್ರ ಸಾಂಸ್ಕೃತಿಕ ಇಲಾಖೆ ರಚಿಸಿರುವ ಈ ಸಮಿತಿಯಲ್ಲಿ, ದಕ್ಷಿಣ ಭಾರತೀಯರು, ಈಶಾನ್ಯ ಭಾರತೀಯರು, ಅಲ್ಪಸಂಖ್ಯಾತರು, ದಲಿತರು ಅಥವಾ ಮಹಿಳೆಯರಿಗೆ ಸ್ಥಾನ ನೀಡಿಲ್ಲ. ಈ ಸಮಿತಿಯ ಬಹುತೇಕ ಎಲ್ಲ ಸದಸ್ಯರು ಕೆಲವು ನಿರ್ದಿಷ್ಟ ಸಾಮಾಜಿಕ ಗುಂಪುಗಳಿಗೆ ಸೇರಿದವರಾಗಿದ್ದು, ಅವರು ಭಾರತೀಯ ಸಮಾಜದ ಜಾತಿ ಶ್ರೇಣಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದರ ಬಗ್ಗೆ ಈ ಹಿಂದೆ ಅಸಮಾಧಾನ ಹೊರ ಹಾಕಿದ್ದ ಮಾಜಿ ಸಿಎಂ ಕುಮಾರಸ್ವಾಮಿಯವರು, ಭಾರತದ 12 ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ 16 ಸದಸ್ಯರ ತಜ್ಞರ ಸಮಿತಿ ರಚಿಸಿದೆ. ಆದರೆ ಇದರಲ್ಲಿ ಕನ್ನಡಿಗರಾಗಲಿ, ದ್ರಾವಿಡ ಪರಂಪರೆಯ ಜ್ಞಾನವಿರುವ ದಕ್ಷಿಣ ಭಾರತೀಯರಾಗಲಿ, ಮಹಿಳೆಯರಾಗಲಿ ಇಲ್ಲವೇ ಇಲ್ಲವಾಗಿರುವುದು ದುರದೃಷ್ಟಕರ ಎಂದಿದ್ದರು.

ಕನ್ನಡಿಗ ಪ್ರತಿನಿಧಿಗಳೇ ಇಲ್ಲದೇ ಕರ್ನಾಟಕದ ಚರಿತ್ರೆ, ಪರಂಪರೆಯ ನಿಷ್ಪಕ್ಷಪಾತ ಅಧ್ಯಯನ ಸಾದುವೆ? ದಕ್ಷಿಣ ಭಾರತೀಯರಿಲ್ಲದೇ ಒಟ್ಟು ಭಾರತದ ಇತಿಹಾಸ ಅಧ್ಯಯನಕ್ಕೆ ಒಳಪಡುವುದಾದರೂ ಹೇಗೆ? ಈ ದೇಶವನ್ನು ಅಂಬೆಗೆ ಹೋಲಿಸಿದವರು ನಾವು. ಹೆಣ್ಣನ್ನು ಪೂಜಿಸುವ ದೇಶದ ಸಂಸ್ಕೃತಿ ಅಧ್ಯಯನ ಮಾಡುವ ಸಮಿತಿಯಲ್ಲಿ ಮಹಿಳೆಗೆ ಸ್ಥಾನವೇ ಇಲ್ಲವಾಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದರು.

ಇತಿಹಾಸ, ಸಂಸ್ಕೃತಿ ವಿಚಾರವಾಗಿ ಪೂರ್ವಾಗ್ರಹಗಳನ್ನು ಹೊಂದಿರುವಂತೆ ಕಾಣುವ, ಉತ್ತರ ಭಾರತೀಯರೇ ತುಂಬಿರುವ ಈ ಸಮಿತಿ ನಡೆಸುವ ಅಧ್ಯಯನದ ವಸ್ತುನಿಷ್ಠತೆ ಬಗ್ಗೆ ಅನುಮಾನಗಳು ದಟ್ಟವಾಗಿವೆ. ಸಮಿತಿಯ ಪುನಾರಚನೆ ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಲಿ ಎಂದು ಆಗ್ರಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *