ಸಹಾಯ ಹಸ್ತ ಚಾಚಿ ಜನರ ಮನಗೆದ್ದಿರೋ ಸೋನು ಸೂದ್ ವಿರುದ್ಧ ಕೇಸ್..!

Public TV
1 Min Read

ಮುಂಬೈ: ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದವರ ನೆರವಿಗೆ ನಿಂತು ಮನೆ ಮಾತಾಗಿರುವ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಪ್ರಕರಣ ದಾಖಲಾಗಿದೆ.

ಹೌದು. ಅನುಮತಿ ಪಡೆಯದೇ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಡಿಸಿದ ಹಿನ್ನೆಲೆಯಲ್ಲಿ ಬಿಎಂಸಿ(ಬೃಹನ್ ಮುಂಬೈ ಮುನ್ಸಿಪಲ್ ಕಾಪೋರೇಶನ್) ಈ ಪ್ರಕರಣ ದಾಖಲಿಸಿದೆ. ಸೋನು ಸೂದ್ ಅವರಿಗೆ ಮುಂಬೈನ ಜುಹುವಿನಲ್ಲಿ 6 ಮಹಡಿಯ ಕಟ್ಟಡವಿದೆ. ಈ ಕಟ್ಟಡವನ್ನು ಇತ್ತೀಚೆಗಷ್ಟೇ ಹೋಟೆಲ್ ಆಗಿ ಮಾರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಎಂಸಿ ಇದೀಗ ನಟನ ವಿರುದ್ಧ ಜುಹು ಪೊಲೀಸ್ ಠಾಣೆಗೆ ಲಿಖಿತ ದೂರು ದಾಖಲಿಸಿದೆ.

ಅನುಮತಿ ಇಲ್ಲದೆಯೇ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಡಿಸಲಾಗಿದೆ. 2020ರ ಅಕ್ಟೋಬರ್ 27ರಂದು ಸೋನು ಸೂದ್ ಅವರಿಗೆ ಮೊದಲ ಬಾರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ನವೆಂಬರ್ 27ರವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನಟನಿಗೆ ಒಂದು ತಿಂಗಳ ಕಾಲ ಸಮಯ ನೀಡಿದ್ದರೂ ಉತ್ತರಿಸಲಿಲ್ಲ ಎಂದು ಬಿಎಂಸಿ ಅಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ.

2021ರ ಜನವರಿ 4 ರಂದು ನಟನ ಆಸ್ತಿ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ಅನಧಿಕೃತವಾಗು ಹೆಚ್ಚುವರಿ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ಆದರೂ ಇದೂವರೆಗೆ ಯಾವುದೇ ಸೂಚನೆಗಳಿಗೆ ನಟ ಪ್ರತಿಕ್ರಿಯಿಸಿಲ್ಲ ಎಂದು ಕೂಡ ಅಧಿಕಾರಿಗಳು ದೂರಿದ್ದಾರೆ.

ಸದ್ಯ ಅಧಿಕಾರಿಗಳ ದೂರು ಸ್ವೀಕರಿಸಿರುವ ಪೊಲೀಸರು ಇದೀಗ ನಟನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಈ ಸಂಬಂಧ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *