ಸರ್ವಾಧಿಕಾರಿ ಸಿಎಂ ಯೋಗಿ ಆದಿತ್ಯನಾಥ್ ವಜಾಗೊಳಿಸಿ- ಡಿಕೆಶಿ ಆಗ್ರಹ

Public TV
3 Min Read

– ಕಾರ್ಮಿಕರೆಂದರೆ ಗುಲಾಮರೇ?
– ಆದಿತ್ಯನಾಥ್‍ಗೆ ಕಿಂಚಿತ್ತೂ ಸಂವಿಧಾನದ ಪರಿಜ್ಞಾನವಿಲ್ಲ

ಬೆಂಗಳೂರು: ಉತ್ತರ ಪ್ರದೇಶ ಕಾರ್ಮಿಕರು ಅನ್ಯ ರಾಜ್ಯಗಳಿಗೆ ಹೋಗಿ ಕೆಲಸ ಮಾಡುವಂತಿಲ್ಲ ಎಂದು ನಿರ್ದೇಶಿಸುವ ಮೂಲಕ ಈ ದೇಶದ ಒಕ್ಕೂಟ ವ್ಯವಸ್ಥೆ ಹಾಗೂ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದಿರುವ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಮ್ಮ ಸಂವಿಧಾನದ ಪರಿಚ್ಛೇದ 19(1)(ಡಿ) ಮತ್ತು (ಈ) ಪ್ರಕಾರ ದೇಶದ ಪ್ರತಿಯೊಬ್ಬ ನಾಗರೀಕ ಯಾವುದೇ ಜಾಗದಲ್ಲಿ ಹೋಗಿ, ಅಲ್ಲಿ ನೆಲೆಸಿ, ಅಲ್ಲಿ ಕೆಲಸ ಮಾಡುವ ಹಕ್ಕನ್ನು ನೀಡಲಾಗಿದೆ. ಆದರೆ ಹೊರ ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ವಾಪಸ್ಸಾಗುತ್ತಿರುವ ಕಾರ್ಮಿಕರನ್ನು ಸ್ವಾಗತಿಸಿ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ವಿಫಲವಾಗಿರುವ ಯೋಗಿ ಆದಿತ್ಯನಾಥ್ ಈ ರೀತಿಯ ಉದ್ಧಟತನದ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಯೋಗಿ ಆದಿತ್ಯನಾಥ್ ಅವರಿಗೆ ಈ ದೇಶದ ಸಂವಿಧಾನದ ಬಗ್ಗೆ ಕಿಂಚಿತ್ತೂ ಪರಿಜ್ಞಾನವಿಲ್ಲ. ಇದ್ದಿದ್ದರೆ ಈ ರೀತಿ ಪ್ರಜಾದ್ರೋಹದ ಮಾತುಗಳನ್ನು ಆಡುತ್ತಿರಲಿಲ್ಲ. ಯಾರು ಬೇಕಾದರೂ ಎಲ್ಲಿಗೆ ಬೇಕಾದರೂ ಹೋಗಿ ಕೆಲಸ ಮಾಡುವ ಮೂಲಭೂತ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಿ ಕೆಲಸ ಮಾಡಲು ಯಾರೂ ಪಾಸ್ ಪೋರ್ಟ್ ತೆಗೆದುಕೊಳ್ಳಬೇಕಿಲ್ಲ. ಯೋಗಿ ಆದಿತ್ಯನಾಥ ಅವರ ನಡೆ ಸರ್ವಾಧಿಕಾರಿ ಧೋರಣೆಯದ್ದಾಗಿದ್ದು, ಪ್ರಜಾತಂತ್ರ ವ್ಯವಸ್ಥೆಯ ಭದ್ರಬುನಾದಿಯನ್ನು ಅಲ್ಲಾಡಿಸುವಂಥದ್ದಾಗಿದೆ ಎಂದು ಕಿಡಿಕಾರಿದರು.

ಉತ್ತರ ಪ್ರದೇಶ ಕಾರ್ಮಿಕರು ದೇಶದ ಎಲ್ಲೆಡೆ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ಕಡೆ ಕೆಲಸ ಮಾಡಿದ್ದಾರೆ. ಅದೇ ರೀತಿ ನಮ್ಮ ಕನ್ನಡಿಗರು ಕೂಡ ಮುಂಬೈ, ದಿಲ್ಲಿ, ಹೈದರಾಬಾದ್, ಉತ್ತರ ಪ್ರದೇಶ ಮತ್ತಿತರ ಕಡೆ ಕೆಲಸ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಅವರನ್ನು ಯೋಗಿ ಆದಿತ್ಯನಾಥ್ ಅವರಂತೆ ಕಟ್ಟಿಹಾಕಲು ಸಾಧ್ಯವೇ? ಹಾಗೆ ನಿರ್ಬಂಧ ಹೇರಲು ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ. ಆದಿತ್ಯನಾಥ ಅವರು ಕಾರ್ಮಿಕರನ್ನು ಗುಲಾಮರೆಂದು ಭಾವಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಭಾರತ ಒಕ್ಕೂಟ ವ್ಯವಸ್ಥೆಯಾಗಿದ್ದು, ಅದು ಯಾರಪ್ಪನ ಆಸ್ತಿಯೂ ಅಲ್ಲ. ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ ನಮ್ಮ ಸಂವಿಧಾನ ಒಂದಷ್ಟು ಹಕ್ಕುಗಳನ್ನು ನೀಡಿದೆ ಅದನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ದುರಾದೃಷ್ಟವಶಾತ್ ಕೇಂದ್ರದಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಸರ್ವಾಧಿಕಾರಿ ಧೋರಣೆ ತೋರುತ್ತಾ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರುತ್ತಿವೆ. ಇದಕ್ಕೆ ಸಣ್ಣ ಉದಾಹರಣೆ ಕಾರ್ಮಿಕರ ವಿಚಾರದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆ. ಇಂತಹ ಅಸಂವಿಧಾನಿಕ ನಿರ್ಧಾರಗಳನ್ನು ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳು ಖಂಡಿಸಿ, ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

ಯೋಗಿ ಮಾಡಿದ್ದೇನು?
ಉತ್ತರ ಪ್ರದೇಶ ಸರ್ಕಾರವು ವಲಸೆ ಕಾರ್ಮಿಕರಿಗಾಗಿಯೇ ಪ್ರತ್ಯೇಕವಾದ ವಲಸೆ ಆಯೋಗ ಸ್ಥಾಪಿಸಲು ನಿರ್ಧರಿಸಿದೆ. ಈ ಮೂಲಕ ಇತರ ರಾಜ್ಯಗಳಿಗೆ ಉತ್ತರ ಪ್ರದೇಶದಿಂದ ಕಾರ್ಮಿಕರು ಬೇಕಾಗಿದ್ದರೆ ಆಯೋಗದ ಅನುಮತಿಯನ್ನು ಪಡೆಯಬೇಕಾಗುತ್ತದೆ.

ಈ ವಿಚಾರವಾಗಿ ಸೋಮವಾರ ಮಾತನಾಡಿದ್ದ ಯೋಗಿ ಆದಿತ್ಯನಾಥ್, ಕೊರೊನಾ ಲಾಕ್‍ಡೌನ್ ವೇಳೆ ಅನೇಕ ರಾಜ್ಯಗಳು ವಲಸೆ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿಲ್ಲ. ಅವರು ನಮ್ಮ ರಾಜ್ಯದ ಬಹು ದೊಡ್ಡ ಸಂಪನ್ಮೂಲ. ಉತ್ತರ ಪ್ರದೇಶದಲ್ಲೇ ಈಗ ಅವರಿಗೆ ಉದ್ಯೋಗ ಕಲ್ಪಿಸಲಾಗುವುದು. ಇದಕ್ಕಾಗಿಯೇ ಆಯೋಗ ರಚಿಸಲಾಗುವುದು. ವಲಸೆ ಕಾರ್ಮಿಕರ ಹಕ್ಕುಗಳನ್ನು ಕಾಪಾಡುವುದು ಮತ್ತು ಶೋಷಣೆ ತಡೆಯುವ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿಮೆ, ಸಾಮಾಜಿಕ ಭದ್ರತೆ, ಮರು ಉದ್ಯೋಗಕ್ಕೆ ನೆರವು, ನಿರುದ್ಯೋಗ ಭತ್ಯೆ ಮುಂತಾದ ವಿಷಯಗಳ ಬಗ್ಗೆ ಆಯೋಗ ಪರಾಮರ್ಶಿಸಿ ಯೋಜನೆಗಳನ್ನು ರೂಪಿಸಲಿದೆ ತಿಳಿಸಿದ್ದರು. ನಮ್ಮ ರಾಜ್ಯದಿಂದ ಕಾರ್ಮಿಕರನ್ನು ಉದ್ಯೋಗಕ್ಕೆ ಕರೆದುಕೊಂಡು ಹೋಗಿ ಅನ್ಯಾಯ ಮಾಡಲಾಗುತ್ತಿದೆ. ಸರಿಯಾಗಿ ಸಂಬಳ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಜನರ ಹಿತ ಕಾಪಾಡಲು ವಲಸೆ ಆಯೋಗ ಸ್ಥಾಪನೆ ಮಾಡುತ್ತಿದ್ದೇವೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

https://www.facebook.com/DKShivakumar.official/videos/1326457644206581/

Share This Article
Leave a Comment

Leave a Reply

Your email address will not be published. Required fields are marked *