ಸರ್ಕಾರ ಟ್ರ್ಯಾಕ್ ತಪ್ಪಿದೆ, ಸರಿ ಮಾಡ್ಲೇಬೇಕು – ಬಿಎಸ್‍ವೈ ವಿರುದ್ಧ ದೂರುಗಳ ಸುರಿಮಳೆ!

Public TV
2 Min Read

ಬೆಂಗಳೂರು: ರಾಜ್ಯ ಬಿಜೆಪಿಯಲ್ಲೀಗ ಎಲ್ಲವೂ ಕುದಿಮೌನ. ಉಗುಳುವಂತಿಲ್ಲ, ನುಂಗುವಂತಿಲ್ಲ. ಬರೀ ಸೌಂಡ್ ಮಾಡಿ ಕೆಲಸ ಮಾಡದ ಆಡಳಿತ ಯಂತ್ರದ ರಿಪೇರಿ ಮಾಡಬೇಕು ಎನ್ನುವ ಕೂಗು ಕೇಳಿಬಂದಿದೆ. ಸಂಪುಟ ವಿಸ್ತರಣೆ ಗೊಂದಲ, ನಿಗಮ ಮಂಡಳಿ ನೇಮಕಾತಿ ಗೊಂದಲ, ಸರ್ಕಾರದ ನಿರ್ಧಾರಗಳ ಗೊಂದಲಗಳ ಬಗ್ಗೆ ಇವತ್ತು ಪಕ್ಷದ ವೇದಿಕೆಯಲ್ಲಿ ಭರ್ಜರಿಯಾಗಿಯೇ ಸೌಂಡ್ ಮಾಡಿತ್ತು. ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು 6ಕ್ಕೂ ಹೆಚ್ಚು ಸಚಿಚರು, ಇಬ್ಬರು ಸಂಸದರು, ಇಬ್ಬರು ಶಾಸಕರು ಭೇಟಿ ಮಾಡಿ ಚರ್ಚೆ ನಡೆಸಿದ್ರು. ಈ ವೇಳೆ ಸರ್ಕಾರ ಟ್ರ್ಯಾಕ್‍ನಲ್ಲಿ ಇಲ್ಲ ಎಂಬ ದೂರುಗಳು ಸುರಿಮಳೆಗೈದಿದ್ದಾರೆ ಎನ್ನಲಾಗಿದೆ. ಆದರಲ್ಲೂ ಓರ್ವ ಶಾಸಕ ಸಿಎಂ ಯಡಿಯೂರಪ್ಪ ಅವರ ಸುತ್ತಲಿನವರ ಬಗ್ಗೆಯೇ ಹೆಚ್ಚು ಅಭಿಪ್ರಾಯ ಮಂಡಿಸಿದ್ದಾರೆ ಎನ್ನಲಾಗಿದೆ.

ಅರುಣ್ ಸಿಂಗ್ ಎದುರು ದೂರು: ನಾವು ಬಿಜೆಪಿ ನಾಯಕರನ್ನೂ ಯಾರನ್ನೂ ದೂರುವುದಿಲ್ಲ. ಆದರೆ ಸರ್ಕಾರ ಟ್ರ್ಯಾಕ್ ನಲ್ಲಿ ಇಲ್ಲ. ಸರ್ಕಾರ ಟ್ರ್ಯಾಕ್ ಗೆ ಬರಬೇಕು. ಈ ನಿಟ್ಟಿನಲ್ಲಿ ಹೈಕಮಾಂಡ್ ರಿಪೇರಿ ಕೆಲಸಕ್ಕೆ ಕೈ ಹಾಕಬೇಕು. ಆಗಿದ್ದಾಗ ಮಾತ್ರ ಬಿಜೆಪಿ ಶಕ್ತಿ ವೃದ್ಧಿಸುತ್ತೆ. ಇಲ್ಲದಿದ್ದರೆ ನಮ್ಮ ಪಕ್ಷಕ್ಕೆ ಕಷ್ಟ ಹೊರತು, ಸರ್ಕಾರ ನಡೆಸುವವರಿಗೆ ಕಷ್ಟ ಆಗಲ್ಲ. ದಯಮಾಡಿ ರಾಜ್ಯದ ಕಡೆ ಗಮನಿಸಿ, ಸರಿಪಡಿಸುವ ಕೆಲಸ ಮಾಡಿ ಎಂದು ಕೆಲ ಸಚಿವರು ಸಿಎಂ ವಿರುದ್ಧವೇ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ನಡುವೆ ದೂರುಗಳನ್ನು ಕೇಳಿಸಿಕೊಂಡ ಬಳಿಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮಾಧಾನದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಎಲ್ಲವನ್ನೂ ರಿಪೇರಿ ಮಾಡುತ್ತೆ. ನೀವು ನಿಮ್ಮ ನಿಮ್ಮ ಕೆಲಸಗಳನ್ನು ಮಾಡಿ ಎಂದು ಪಕ್ಷದ ಕೆಲ ಸಚಿವರು, ಶಾಸಕರಿಗೆ ಅರುಣ್ ಸಿಂಗ್ ರಿಪೇರಿ ಅಭಯ ನೀಡಿದ್ದಾರೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ.

ರಿಪೇರಿ ನಮ್ಮ ಕೆಲಸ: ರಿಪೇರಿ ನಾವು ಮಾಡುತ್ತೇವೆ. ಹೈಕಮಾಂಡ್ ತನ್ನ ಕೆಲಸ ಮಾಡುತ್ತೆ. ಹೈಕಮಾಂಡ್ ಗಮನದಲ್ಲಿ ಎಲ್ಲ ಸಂಪೂರ್ಣ ಮಾಹಿತಿ ಇದೆ. ಯಾವುದನ್ನು ರಿಪೇರಿ ಮಾಡಬೇಕು, ಯಾರನ್ನು ರಿಪೇರಿ ಮಾಡಬೇಕು ಅನ್ನೋದು ಗೊತ್ತಿದೆ. ಪಕ್ಷದ ಪ್ರತಿ ನಿರ್ಧಾರಗಳು, ಸರ್ಕಾರದ ಪ್ರತಿ ನಿರ್ಧಾರಗಳು ಹೈಕಮಾಂಡ್ ಗಮನದಲ್ಲಿ ಇವೆ. ಆದಷ್ಟು ಶೀಘ್ರ ರಿಪೇರಿ ಕೆಲಸ ಪೂರ್ಣ ಆಗುತ್ತೆ. ಯಾರೂ ಬಹಿರಂಗವಾಗಿ ಮಾತಾಡಬೇಡಿ, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ. ನನಗೆ ಏನೇ ಇದ್ದರೂ ಪತ್ರ ಬರೆಯಿರಿ, ನನ್ನ ಗಮನಕ್ಕೆ ತನ್ನಿ. ನಾನು ಯಾವುದನ್ನೂ ಮುಚ್ಚಿಡದೇ ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಇವತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೇಶವಕೃಪಾಗೆ ತೆರಳಿ ಆರ್ ಎಸ್‍ಎಸ್ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಆರ್ ಸ್‍ಎಸ್ ಮುಖಂಡರು ಸಹ ಸರ್ಕಾರ ಮತ್ತು ಪಕ್ಷದ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಬಿಜೆಪಿಯಲ್ಲೀನ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿಗೆ ವಾಟರ್ ಸ್ಪ್ರೇ ಮಾಡಲು ಅರುಣ್ ಸಿಂಗ್‍ಗೂ ಕೂಡ ಸಾಧ್ಯವಾಗಿಲ್ಲ, ಆದರೂ ಶೀಘ್ರ ವಾಟರ್ ಸ್ಪ್ರೇ ಮಾಡದಿದ್ದರೆ ಬಿಜೆಪಿ ಸ್ಥಿತಿ ಚಿಂತಾಜನಕ ಎಂದು ಹೈಕಮಾಂಡ್‍ಗೆ ವರದಿ ಸಲ್ಲಿಸುವುದಕ್ಕಂತೂ ತಡೆ ಇಲ್ಲ ಅನ್ನೋದು ಸ್ಪಷ್ಟ.

Share This Article
Leave a Comment

Leave a Reply

Your email address will not be published. Required fields are marked *