ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ 5 ವರ್ಷ ಗ್ರಾಮೀಣ ಸೇವೆ ಕಡ್ಡಾಯ ಮಾಡಿ- ಸಿಎಂಗೆ ಸೋಮಶೇಖರ್ ಪತ್ರ

Public TV
3 Min Read

ಬೆಂಗಳೂರು: ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ ಗ್ರಾಮೀಣ ಸೇವೆ ಕಡ್ಡಾಯ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವ ಎಸ್.ಟಿ.ಸೋಮಶೇಖರ್ ಪತ್ರ ಬರೆದಿದ್ದಾರೆ.

ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ ಕನಿಷ್ಟ 5 ವರ್ಷಗಳ ಕಾಲ ಗ್ರಾಮೀಣ ಸೇವೆ ಕಡ್ಡಾಯ ಮಾಡಬೇಕು ಎಂದು ಎಸ್.ಟಿ.ಸೋಮಶೇಖರ್ ಒತ್ತಾಯಿಸಿದ್ದಾರೆ.

ಈ ಹಿಂದೆ ಸಹ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಸರ್ಕಾರಿ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ವೈದ್ಯಕೀಯ ಪದವಿ ಪಡೆಯುವವರಿಗೆ ಇಂಟರ್ನ್‍ಶಿಪ್ ಅಥವಾ ಇಂತಿಷ್ಟು ವರ್ಷಗಳ ಕಾಲ ಗ್ರಾಮೀಣ ಸೇವೆ ಕಡ್ಡಾಯ ಮಾಡಬೇಕು ಎಂದು ಹಲವರು ಧ್ವನಿ ಎತ್ತಿದ್ದರು. ಇದಕ್ಕೆ ಕೆಲವರು ವಿರೋಧ ಸಹ ವ್ಯಕ್ತಪಡಿಸಿದ್ದರು. ಇದೀಗ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಿಎಂಗೆ ಪತ್ರ ಬರೆಯುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

ಪತ್ರದಲ್ಲಿ ಏನಿದೆ?
ನಮ್ಮ ರಾಜ್ಯದಲ್ಲಿ ಪ್ರತಿಭಾವಂತರಿಗೇನೂ ಕೊರತೆ ಇಲ್ಲ. ಹಾಗೇ ರಾಜ್ಯ ಸರ್ಕಾರ ಸಹ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕ ಸಹಕಾರವನ್ನು ನೀಡುತ್ತಾ ಬಂದಿದೆ. ಇದಕ್ಕೆ ವೈದ್ಯಕೀಯ ಶಿಕ್ಷಣ ರಂಗವೂ ಹೊರತಾಗಿಲ್ಲ. ಪ್ರತಿ ವರ್ಷ ವೈದ್ಯಕೀಯ ಶಿಕ್ಷಣಕ್ಕೆ ಸರ್ಕಾರ ಅಗಾಧವಾಗಿ ಖರ್ಚು ಮಾಡುತ್ತಾ ಬಂದಿದೆ. ಸರ್ಕಾರಿ ಕೋಟಾದಲ್ಲಿ ಓದುವ ಒಬ್ಬ ವೈದ್ಯಕೀಯ ವಿದ್ಯಾರ್ಥಿ ವಿದ್ಯಾಭ್ಯಾಸ ಅವಧಿಯನ್ನು ಮುಗಿಸುವ ಹೊತ್ತಿಗೆ ಸರ್ಕಾರದಿಂದ 40 ರಿಂದ 50 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಸರ್ಕಾರ ಇಷ್ಟೆಲ್ಲಾ ವೆಚ್ಚ ಮಾಡಿದರೂ ನಮ್ಮ ಪ್ರತಿಭೆಗಳು ನಮಗೆ ದಕ್ಕುತ್ತಿಲ್ಲ. ಕೆಲವು ವೈದ್ಯರು ನಮ್ಮ ಸೌಲಭ್ಯವನ್ನು ಪಡೆದು, ಕಲಿತು ವಿದೇಶಗಳಿಗೆ ಹೋಗಿ ಅಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ವೈದ್ಯರ ಕೊರತೆ ಹೆಚ್ಚಾಗುತ್ತಿದೆ. ತಮ್ಮ ಕಾಲಾವಧಿಯಲ್ಲಿ ಇಂಥದ್ದೊಂದು ಪ್ರಕ್ರಿಯೆಗೆ ಕಡಿವಾಣ ಬೀಳಬೇಕಿದೆ. ನಮ್ಮ ಪ್ರತಿಭೆಗಳು ನಮ್ಮಲ್ಲಿಯೇ ಸೇವೆ ಸಲ್ಲಿಸುವಂತಾಗಬೇಕು. ಪ್ರತಿಭಾ ಪಲಾಯನ ನಿಲ್ಲುವಂತಾಗಬೇಕು.

ಸರ್ಕಾರಿ ಕೋಟಾದಲ್ಲಿ ಕಲಿತ ವೈದ್ಯರು ಕನಿಷ್ಠ ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ಈ ಮೂಲಕ ನಮ್ಮ ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಸಹ ನುರಿತ ತಜ್ಞ ವೈದ್ಯರ ಸೇವೆ ಲಭಿಸಬೇಕು. ಇಂದು ಹಳ್ಳಿ ಎಂದರೆ ಮೂಗು ಮುರಿಯುವ ಮನೋಭಾವ ಹೆಚ್ಚಾಗುತ್ತಿದೆ. ಆದರೆ ಹಳ್ಳಿ ಸಶಕ್ತವಾಗಿದ್ದರೆ, ಆರೋಗ್ಯವಾಗಿದ್ದರೆ ದೇಶದ ಅಭಿವೃದ್ಧಿ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಿದೆ. ಹಳ್ಳಿಗಳಲ್ಲಿ ಕೆಲಸ ಮಾಡುವ ಮನೋಭಾವಕ್ಕೆ ನಾವು ಪ್ರೋತ್ಸಾಹ ನೀಡಬೇಕಿದ್ದು, ಇದಕ್ಕೊಂದು ಸೂಕ್ತ ಕಾನೂನು ಚೌಕಟ್ಟು ನಿರ್ಮಾಣ ಮಾಡುವುದು ಮುಖ್ಯವಾಗುತ್ತದೆ.

ಹೀಗಾಗಿ ನಮ್ಮ ರಾಜ್ಯದ ಸಕಲ ಸೌಕರ್ಯವನ್ನು ಪಡೆದು ವೈದ್ಯರಾಗಿ ಹೊರ ಬರುವ ಪ್ರತಿಯೊಬ್ಬರೂ ಸಹ ರಾಜ್ಯದಲ್ಲಿ 5 ವರ್ಷ ಕಡ್ಡಾಯವಾಗಿ ವೃತ್ತಿಯನ್ನು ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಕಾನೂನೊಂದನ್ನು ತಾವು ರೂಪಿಸಬೇಕು. ಈಗಾಗಲೇ ಹೀಗೆ ಸೇವೆ ಮಾಡುವ ವೈದ್ಯರಿಗೆ ಅತಿ ಹೆಚ್ಚಿನ ವೇತನವನ್ನು ನೀಡುತ್ತೇವೆ. ಸೌಲಭ್ಯಗಳನ್ನು ಕೊಡುತ್ತೇವೆಂದರೂ ವೈದ್ಯರು ಮುಂದೆ ಬರುತ್ತಿಲ್ಲ. ಹೀಗಾಗಿ ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನವನ್ನು ಕಲ್ಪಿಸಿಕೊಡುವ ಮೂಲಕ ಹಳ್ಳಿಗಳಿಗೂ ಉತ್ತಮ ವೈದ್ಯಕೀಯ ಸೇವೆ ಲಭಿಸುವಂತೆ ಮಾಡಬೇಕಿದೆ. ಈ ಮೂಲಕ ನಮ್ಮ ರಾಜ್ಯದ ಹಣವನ್ನು ಬಳಸಿ ವೈದ್ಯರಾದವರ ಸೇವೆಯನ್ನು ನಮ್ಮ ರಾಜ್ಯದ ನಾಗರಿಕರಿಗೇ ಲಭಿಸುವಂತಾಗಬೇಕು.

ಈಗ ಕೊರೊನಾ ಸಂಕಷ್ಟ ಕಾಲವಾಗಿರುವುದರಿಂದ ಇಂಥದ್ದೊಂದು ನಿಲುವಿನ ಅಗತ್ಯವಿದೆ. ಜೊತೆಗೆ ಸರ್ಕಾರಿ ಸೌಲಭ್ಯ ಪಡೆಯುವ ಪ್ರತಿಯೊಬ್ಬರಲ್ಲೂ ಇಂತಹ ಮನೋಭಾವ ಬರಬೇಕಿದೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ವೈದ್ಯಕೀಯ ನೆರವು ಸಿಗಬೇಕೆಂದರೆ ಕಠಿಣವಾದ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ಸದನದಲ್ಲಿ ಮಂಡಿಸಿ ಜಾರಿಗೊಳಿಸಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ಮೂಲಕ ಪ್ರತಿಭಾ ಪಲಾಯನಕ್ಕೆ ತಡೆ ಹಾಕಬೇಕಿದೆ.

ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಕಟ್ಟುನಿಟ್ಟಿನ ನೀತಿಯನ್ನು ಸರ್ಕಾರದಿಂದ ರಚಿಸಬೇಕಿದ್ದು, ವೈದ್ಯಕೀಯ ಶಿಕ್ಷಣ ಓದಿಗೆ ಅವರು ಮುಂದಾಗುವಾಗಲೇ ಸರ್ಕಾರಿ ಕೋಟಾದ ಲಾಭ ಪಡೆಯಬೇಕೆಂದಿದ್ದರೆ, ಅವರ ಮೆರಿಟ್ ಆಧಾರದ ಜೊತೆಗೆ ರಾಜ್ಯದಲ್ಲಿ 5 ವರ್ಷ ಸೇವೆ ಸಲ್ಲಿಸುತ್ತೇವೆಂಬ ಕರಾರಿಗೆ ಮೊದಲೇ ಸಹಿ ಹಾಕಿಸಿಕೊಳ್ಳುವಂತಹ ನಿಟ್ಟಿನಲ್ಲಿ ಕಾನೂನು ರೂಪಿಸಿದರೆ ಪರಿಹಾರ ದೊರಕಬಹುದು ಎಂಬುದು ನನ್ನ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ತಾವುಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಂಪುಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುವಂತೆ ಮತ್ತೊಮ್ಮೆ ತಮ್ಮಲ್ಲಿ ಮನವಿ ಮಾಡುತ್ತೇನೆ.

Share This Article
Leave a Comment

Leave a Reply

Your email address will not be published. Required fields are marked *