ಸರ್ಕಾರದ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪ

Public TV
2 Min Read

– ಗ್ರಾಮೀಣ ಭಾಗಕ್ಕೆ ಯೋಜನೆ ತಲುಪಿಸುವಲ್ಲಿ, ಸರ್ಕಾರ ವಿಫಲ
– 2019ರ ಮಾರ್ಚ್‍ಗೆ ಮುಗಿಯಬೇಕಿದ್ದ ಯೋಜನೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

ಶಿವಮೊಗ್ಗ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪ ಕೇಳಿಬಂದಿದೆ.

ಗ್ರಾಮೀಣ ಭಾಗಕ್ಕೆ ಕಡಿಮೆ ಯೂನಿಟ್ ದರದಲ್ಲಿ ನಿರಂತರ ವಿದ್ಯುತ್ ನೀಡುವ ಸಲುವಾಗಿ ಸರ್ಕಾರ ನಿರಂತರ ಜ್ಯೋತಿ ವಿದ್ಯುತ್ ಯೋಜನೆ ಜಾರಿಗೊಳಿಸಿತ್ತು. ಆದರೆ ಅಧಿಕಾರಿಗಳ ಅಸಡ್ಡೆ ಮತ್ತು ಭ್ರಷ್ಟಾಚಾರದಿಂದಾಗಿ ನೆನೆಗುದಿಗೆ ಬಿದ್ದಂತಾಗಿದೆ. ಸರಿ ಸುಮಾರು 2019 ಮಾರ್ಚ್‍ಗೆ ಮುಗಿಯಬೇಕಿದ್ದ ಈ ಯೋಜನೆ ಇನ್ನೂ ಕೂಡ ಪೂರ್ಣಗೊಳ್ಳದೇ ಕೆಲವು ಕಡೆ ಇನ್ನೂ ಆರಂಭವಾಗದೇ ವಿಫಲವಾಗಿದೆ.

ನಿರಂತರ ಜ್ಯೋತಿ ವಿದ್ಯುತ್ ಯೋಜನೆಯ ಭ್ರಷ್ಟಾಚಾರದ ಆರೋಪದಲ್ಲಿ ಮೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು, ಶಾಮೀಲಾಗಿ ಈ ಯೋಜನೆ ಫಲ ಪ್ರದವಾಗಿಸಲು ಬಿಡದೇ, ಗ್ರಾಮೀಣ ಭಾಗದ ಜನರಿಗೆ ವಿದ್ಯುತ್ ನೀಡದೇ, ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯೊಂದು ಹಳ್ಳ ಹಿಡಿಯುವಂತೆ ಮಾಡಲಾಗಿದೆ.

ಈ ಸಂಬಂಧ ಮೆಸ್ಕಾಂ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕಳೆದ ಫೆಬ್ರವರಿ ತಿಂಗಳಲ್ಲಿ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಯೋಜನೆ ವಿಳಂಬ ಮತ್ತು ಕಳಪೆ ವಸ್ತುಗಳ ಬಳಕೆ ಮಾಡಲಾಗಿದೆ ಎಂದು ನೇರವಾಗಿ ಆರೋಪ ಮಾಡಿದ್ದರು. ಜೊತೆಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಆವೇಶ, ಕೇವಲ ಸಭೆಗೆ ಮಾತ್ರ ಸೀಮಿತವಾಯ್ತಾ ಎಂಬ ಅನುಮಾನ ಇದೀಗ ಮೂಡತೊಡಗಿದೆ.

ಟೆಂಡರ್ ನಲ್ಲಿ ಉಲ್ಲೇಖಿಸಿರುವ ಸಾಮಾಗ್ರಿಗಳನ್ನು ಏಕೆ ಬಳಸಿಲ್ಲ. ಕಂಟ್ರಾಕ್ಟರ್ ಗೆ ಯಾರು ಕೇಳಬೇಕು. ಅದರಲ್ಲೂ ಸಾಮಾಗ್ರಿಗಳನ್ನು ಹಾಕದೇ, ಬಿಲ್ ಕೂಡ ಮಾಡಿಸಿಕೊಂಡಿದ್ದು, ನಿರಂತರ ಜ್ಯೋತಿ ಯೋಜನೆಯಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮಗ್ರ ವರದಿಯನ್ನು ನಿಮ್ಮ ಹಸ್ತಾಕ್ಷರ ಸಹಿತವಾಗಿ ನೀಡಿ ಎಂದು ಸೂಚನೆ ನೀಡಿದ್ದರು. ಆದರೆ ಸಭೆ ಕಳೆದು ಸುಮಾರು ಐದು ತಿಂಗಳು ಕಳೆಯುತ್ತಾ ಬಂದಿದಿದ್ದರೂ ಕೂಡ ಇದುವರೆಗೂ ಈ ಯೋಜನೆ ಫಲಪ್ರದವಾಗಿಲ್ಲ. ಇದನ್ನು ಸ್ವತಃ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ಒಪ್ಪಿಕೊಳ್ಳುತ್ತಾರೆ.

ಒಟ್ಟಿನಲ್ಲಿ ನಿರಂತರ ಜ್ಯೋತಿ ಯೋಜನೆಯ ಫೀಡರ್ ಖರೀದಿಯಲ್ಲಿಯೇ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಇದೀಗ ಕೇಳಿ ಬಂದಿದೆ. ಸರ್ಕಾರ ಅದರಲ್ಲೂ ಸಿ.ಎಂ. ತವರು ಜಿಲ್ಲೆಯಲ್ಲಿಯೇ ಯೋಜನೆಯೊಂದು ಹಳ್ಳ ಹಿಡಿದಿರುವುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದ್ದು, ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ. ಏನೇ ಆಗಲಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ತಮ್ಮ ಕ್ಷೇತ್ರದಲ್ಲಿಯೇ ಈ ರೀತಿಯ ಗಂಭೀರವಾದ ಆರೋಪ ಕೇಳಿ ಬಂದಿರುವುದಕ್ಕೆ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಇದನ್ನೂ ಓದಿ :ಭ್ರಷ್ಟಾಚಾರಿಗಳ ಪರ ಸಿಎಂ ನಿಂತಿದ್ದಾರೆ: ಎಎಪಿ ಆರೋಪ

Share This Article
Leave a Comment

Leave a Reply

Your email address will not be published. Required fields are marked *