ಸರ್ಕಾರಕ್ಕೊಂದು ಅಗ್ನಿಪರೀಕ್ಷೆ, ಎಚ್ಚರ ತಪ್ಪಿದ್ರೆ ಜನರ ಬದುಕು ಮೂರಾಬಟ್ಟೆ: ಕುಮಾರಸ್ವಾಮಿ

Public TV
1 Min Read

ಬೆಂಗಳೂರು: ಒಂದು ಕಡೆ ಕೊರೊನಾ ಸೋಂಕಿನ ಭೀತಿ, ಈಗ ನೆರೆಪೀಡಿತ ಪರಿಸ್ಥಿತಿ ಸರ್ಕಾರಕ್ಕೊಂದು ಅಗ್ನಿಪರೀಕ್ಷೆ. ಎಚ್ಚರ ತಪ್ಪಿದರೆ ಜನರ ಬದುಕು ಮೂರಾಬಟ್ಟೆಯಾಗುತ್ತದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಅತಿವೃಷ್ಟಿ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮೊದಲಿಗೆ “ಮುಂಗಾರು ಮಳೆಗೆ ನಲುಗಿರುವ ರಾಜ್ಯದ ಜನತೆ ಮತ್ತು ಜಾನುವಾರುಗಳ ರಕ್ಷಣೆಗೆ ಸರ್ಕಾರ ಸಮರೋಪಾದಿಯಲ್ಲಿ ಸ್ಪಂದಿಸುವ ಪರಿಹಾರ ಕಾಮಗಾರಿಗಳನ್ನು ಅನುಷ್ಠಾನ ಮಾಡುವಂತೆ” ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಬಾರಿಯೂ ರಾಜ್ಯ ಅತಿವೃಷ್ಟಿಯ ಸಂಕಷ್ಟಕ್ಕೆ ಸಿಲುಕಿದ್ದು, ವಿಶೇಷವಾಗಿ ರೈತರು ಕಂಗಾಲಾಗಿದ್ದಾರೆ. ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂಗಾರಿನ ಅಬ್ಬರ ಭೀತಿಯ ವಾತಾವರಣ ಸೃಷ್ಟಿಸಿದೆ. ಜಿಲ್ಲಾವಾರು ವಿಶೇಷ ಕಾರ್ಯಪಡೆ ರಚಿಸುವ ಮೂಲಕ ನೆರೆ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಅತಿವೃಷ್ಟಿ ಸಂತ್ರಸ್ತರಿಗೆ ಕೂಡಲೇ ಆಸರೆ ಕೇಂದ್ರಗಳನ್ನು ಸ್ಥಾಪಿಸಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಹಾಗೂ ಮನೆ-ಮಠ ಕಳೆದುಕೊಂಡವರಿಗೆ, ಜೀವ ಹಾನಿಗೊಳಗಾದವರಿಗೆ ತಡಮಾಡದೆ ಸರ್ಕಾರ ಸಹಾಯಹಸ್ತ ಚಾಚಬೇಕು ಎಂದಿದ್ದಾರೆ.

“ಸತತ ನೆರೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ವಿಶೇಷ ಆರ್ಥಿಕ ನೆರವು ನೀಡಬೇಕು. ರಾಜ್ಯ ಸರ್ಕಾರ ಕೂಡ ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ತರಬೇಕು” ಎಂದು ಎಚ್‍ಡಿಕೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಅತಿವೃಷ್ಟಿ ಸಂತ್ರಸ್ತರ ಪರಿಹಾರ ಕಾಮಗಾರಿಗಳಿಗೆ ಹಣಕಾಸಿನ ಕೊರತೆಯಾಗದಂತೆ ಸಕಾಲಿಕ ಎಚ್ಚರಿಕೆಯನ್ನು ಸರ್ಕಾರ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಒಂದು ಕಡೆ ಕೊರೊನಾ ಸೋಂಕಿನ ಭೀತಿ, ಈಗ ನೆರೆಪೀಡಿತ ಪರಿಸ್ಥಿತಿ ಸರ್ಕಾರಕ್ಕೊಂದು ಅಗ್ನಿಪರೀಕ್ಷೆ. ಎಚ್ಚರ ತಪ್ಪಿದರೆ ಜನರ ಬದುಕು ಮೂರಾಬಟ್ಟೆಯಾಗುತ್ತದೆ ಎಂದಿದ್ದಾರೆ.

ಸಚಿವರು ಮತ್ತು ಅಧಿಕಾರಿಗಳು ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ, ಅಲ್ಲಿಯೇ ಮೊಕ್ಕಾಂ ಮಾಡಿ ಪರಿಸ್ಥಿತಿಯ ಉಸ್ತುವಾರಿ ನೋಡಿಕೊಳ್ಳುವ ಮೂಲಕ ನೆರೆ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಕುಮಾರಸ್ವಾಮಿ ಟ್ವೀಟರ್ ಮೂಲಕ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *