ಸರಸ, ವಿರಸ, ಸಾಮರಸ್ಯ ಇದ್ದರೆ ಸಂಸಾರ – ಘಟನೆಯ ಬಗ್ಗೆ ಕಲ್ಯಾಣ್ ಸ್ಪಷ್ಟನೆ

Public TV
3 Min Read

– ನಾನು, ನನ್ನ ಹೆಂಡ್ತಿ ಚೆನ್ನಾಗಿದ್ದೀವಿ

ಬೆಳಗಾವಿ: ಪ್ರತಿಯೊಂದು ಸಂಸಾರದಲ್ಲೂ ಜಗಳ ನಡೆಯುತ್ತದೆ. ಸರಸ, ವಿರಸ, ಸಾಮರಸ್ಯ ಇದ್ದರೆ ಅದು ಸಂಸಾರ. ನಮ್ಮ ಸಂಸಾರ ಚೆನ್ನಾಗಿದೆ ಎಂದು ಪ್ರೇಮಕವಿ ಕೆ.ಕಲ್ಯಾಣ್ ತಮ್ಮ ದಾಂಪತ್ಯ ಜೀವನದ ಬಗ್ಗೆ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಕಲ್ಯಾಣ್, ನಮ್ಮ ತಂದೆ ತೀರಿಕೊಂಡು 14 ವರ್ಷ ಆಗಿದೆ. ನಮ್ಮ ತಾಯಿ ಎರಡೂವರೆ ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಅಲ್ಲಿಯತನಕ ನಾವೆಲ್ಲರೂ ಒಟ್ಟಿಗೆ ಇದ್ವಿ, ಆಮೇಲೆ ನಾನು, ನನ್ನ ಹೆಂಡತಿ ಒಟ್ಟಿಗೆ ಬೇರೆ ಮನೆಯಲ್ಲಿ ವಾಸಮಾಡುತ್ತಿದ್ವಿ. ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಪತ್ನಿಯ ಪೋಷಕರು ವಾಸಮಾಡುತ್ತಿದ್ದರು. ವಯಸ್ಸಾದರೂ ಯಾಕೆ ಬೇರೆ ಇರಬೇಕು ಎಂದು ನಮ್ಮ ಮನೆಗೆ ಕರೆದುಕೊಂಡು ಬಂದು ಒಟ್ಟಿಗೆ ವಾಸ ಮಾಡುತ್ತಿದ್ದೆವು ಎಂದರು.

ಮೊದಲಿಗೆ ನಾನು ನನ್ನ ಹೆಂಡತಿ ಚೆನ್ನಾಗಿದ್ದೀವಿ. ನಮ್ಮಿಬ್ಬರಲ್ಲಿ ಯಾವುದೇ ಪರಸ್ಪರ ಗೊಂದಲಗಳಿಲ್ಲ. ನನ್ನ ಪತ್ನಿ ಬೆಳಗಾವಿಯವರು ನಾವಿಬ್ಬರು ಮದುವೆಯಾಗಿ 15 ವರ್ಷ ಆಗಿದೆ. ಪ್ರತಿಯೊಬ್ಬರ ಸಂಸಾರದಲ್ಲೂ ಸಣ್ಣಪುಟ್ಟ ಏಳು ಬೀಳುಗಳು ಆರೋಪಗಳಿರುತ್ತವೆ. ಸರಸ, ವಿರಸ, ಸಾಮರಸ್ಯ ಇದ್ದರೇನೆ ಅದು ಸಂಸಾರ. ನಮ್ಮ ಸಂಸಾರನೂ ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದರು.

ಅತ್ತ, ಮಾವ ಬಂದ ಒಂದು ವಾರಕ್ಕೆ ಗಂಗಾ ಕುಲಕರ್ಣಿಯನ್ನು ಅಡಿಗೆ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿತ್ತು. ಆದರೆ ಆಕೆಯ ನಡವಳಿಕೆ ನನಗೂ ನನ್ನ ಪತ್ನಿಗೂ ಇಷ್ಟವಾಗಿರಲಿಲ್ಲ. ಅಲ್ಲದೇ ಆಕೆಯ ಬಂದ 4-5 ದಿನಗಳಲ್ಲಿ ಪತ್ನಿ, ಅತ್ತೆ, ಮಾವ ಯಾಕೋ ಸೈಲೆಂಟ್ ಆದರು. ನನಗೆ ಏನೋ ನಿಗೂಢತೆ ರೀತಿ ಕಾಣಿಸುತ್ತಿತ್ತು. ಒಂದು ದಿನ ಮಧ್ಯರಾತ್ರಿ ಅತ್ತೆ ದೇವರ ಮನೆಯಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ದೀಪ ಹಚ್ಚಿಕೊಂಡು ಬೆಳಗ್ಗೆ ಸುಮಾರು 3 ಗಂಟೆಯವರೆಗೂ ಪೂಜೆ ಮಾಡಲು ಶುರು ಮಾಡಿದರು. ಆಗ ಗಂಗಾ ಕುಲಕರ್ಣಿಯ ಸಲಹೆಯಂತೆ ಪೂಜೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಾಯಿತು.

ಪದೇ ಪದೇ ನನಗೆ ಗೊತ್ತಿರುವ ಗುರೂಜಿ ಇದ್ದಾರೆ. ಅವರ ಆಶೀರ್ವಾದ ಪಡೆದುಕೊಂಡರೆ ಒಳ್ಳೆದಾಗುತ್ತದೆ ಎಂದು ಗಂಗಾ ಕುಲಕರ್ಣಿ ಹೇಳುತ್ತಿದ್ದರು. ಒಮ್ಮೆ ಆ ವ್ಯಕ್ತಿಗೆ ಫೋನ್ ಮಾಡಿ ಕೊಟ್ಟಿದ್ದರು. ಆತನ ಹೆಸರು ಶಿವನಂದ ವಾಲಿ. ಪೂಜೆ ಮಾಡಿಸಲು ಹೇಳಿದ್ರು, ನಾನು ಒಪ್ಪಲಿಲ್ಲ. ಆದರೆ ನಮ್ಮ ಅತ್ತೆಯವರು ಗುರೂಜಿ ಜೊತೆ ಗಂಟೆಗಟ್ಟಲೇ ಫೋನಿನಲ್ಲಿ ಮಾತನಾಡುತ್ತಿದ್ದರು. ಜನವರಿ 9 ರಂದು ರಾತ್ರಿ ಬೆಳಗಾವಿಗೆ ಹೋಗಿ ಬರುತ್ತೇವೆ ಎಂದು ಪತ್ನಿ, ಅತ್ತೆ, ಮಾವ ಮೂವರು ಹೋದರು. ಆದರೆ ಜನವರಿ 10ರಂದು ಪತ್ನಿಯ ಫೋನ್ ಸ್ವಿಚ್ ಆಫ್ ಆಗಿತ್ತು. ಕೊನೆಗೆ ಜನವರಿ 17 ರಂದು ಬೆಳಗಾವಿಗೆ ಬಂದು ನೋಡಿದೆ. ಆಗ ಅತ್ತೆ ನನ್ನ ಪತ್ನಿಯನ್ನು ಭೇಟಿ ಮಾಡಲು ಬಿಡಲಿಲ್ಲ. ಅಲ್ಲಿಯೂ ಗಂಗಾ ಕುಲಕರ್ಣಿ ಹೇಳಿದಂತೆ ಪೂಜೆ ಮಾಡುತ್ತಿದ್ದರು ಎಂದು ಕಲ್ಯಾಣ್ ತಿಳಿಸಿದರು.

ಒಂದು ದಿನ ಮೂವರು ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗಿದ್ದರು. ಆ ಮನೆಯಲ್ಲಿ ಗಂಗಾ ಕುಲಕರ್ಣಿ, ಶಿವನಂದ ವಾಲಿ ಪೂಜೆ ಮಾಡಲು ಶುರು ಮಾಡಿದ್ದರು. ಈ ವಿಚಾರ ಗೊತ್ತಾಗಿ ಬರುವಷ್ಟರಲ್ಲಿ ಆ ಮನೆಯನ್ನು ಖಾಲಿ ಮಾಡಿ ಬೇರೆ ಕಡೆ ಹೋಗಿದ್ದಾರೆ ಎಂದು ನನಗೆ ಗೊತ್ತಾಯಿತು. ಬೆಂಗಳೂರಿನ ಬಂದು ಎಲ್ಲ ಕಡೆ ಹುಡುಕಿದೆ. ಆಗ ಮೂವರು ಪತ್ತೆಯಾದರು. ಆದರೆ ಈ ವೇಳೆ ನನ್ನ ಪತ್ನಿಯನ್ನು ಮಾತನಾಡಲು ಬಿಡದೆ ರೂಮಿಗೆ ಕರೆದುಕೊಂಡು ಹೋದರು. ಆಕೆಯ ಕತ್ತಲ್ಲಿ ನಾನು ಕಟ್ಟಿದ್ದ ತಾಳಿಯೂ ಇರಲಿಲ್ಲ. ನನ್ನ ಪತ್ನಿ ಬೇರೆ ಅಪರಿಚಿತರ ಜೊತೆ ಮಾತನಾಡುವ ರೀತಿ ಮಾತಾಡಿದರು.

ಅಲ್ಲದೇ ನನ್ನ ಪತ್ನಿಯ ತಾಯಿ ಸಂಬಂಧಿಕರಿಗೆ ಫೋನ್ ಮಾಡಿ ಲಕ್ಷಾಂತರ ಹಣಬೇಕು ಎಂದು ಕೇಳಿದ್ದಾರೆ. ಪೂಜೆ ಮಾಡಿಸಬೇಕು, ಇಲ್ಲವಾದರೆ ನಮ್ಮ ಪ್ರಾಣಕ್ಕೆ ಅಪಾಯ ಇದೆ. ಹಣವನ್ನು ಗುರೂಜಿಗೆ ಕೊಡಬೇಕು ಎಂದು ಹಣ ಕೇಳಿದ್ದಾರೆ. ಒಂದು ದಿನ ನನ್ನ ಪತ್ನಿಯ ಅಕೌಂಟ್‍ನಿಂದ ಏಕಾಏಕಿ 1.20 ಲಕ್ಷ ಹಣ ಶಿವಾನಂದ ವಾಲಿಗೆ ಅಕೌಂಟ್‍ಗೆ ವರ್ಗಾವಣೆಯಾಗಿದೆ. ಸಂಬಂಧಿಕರ ಬಳಿ ಪಡೆದಿದ್ದ ಹಣವನ್ನ ಶಿವಾನಂದ ವಾಲಿಗೆ ಕೊಟ್ಟಿದ್ದಾರೆ. ಅಲ್ಲದೇ ಬೆಳಗಾವಿಯಲ್ಲಿ ಅತ್ತೆ, ಮಾವ ಹೆಸರಿನಲ್ಲಿದ್ದ ಆಸ್ತಿಯೂ ಕೂಡ ಶಿವಾನಂದ ವಾಲಿಗೆ ವರ್ಗಾವಣೆ ಆಗಿದೆ ಎಂದರು.

ಇದ್ದಕ್ಕಿದ್ದಂತೆ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು. ಮೂರು ತಿಂಗಳಿನಿಂದ ಸಂಬಂಧಿಕರ ಸಂಪರ್ಕದಲ್ಲೂ ಇರಲಿಲ್ಲ. ನನ್ನ ಪತ್ನಿಯ ಕುಟುಂಬಸ್ಥರ ಜೊತೆ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ನಾನು ದೂರು ದಾಖಲಿಸಿರುವೆ. ದೂರಿನಲ್ಲಿ ನನ್ನ ಅತ್ತೆ, ಮಾವ ಕಾಣಿಸಿಕೊಳ್ಳುತ್ತಿಲ್ಲ. ನಮ್ಮ ಕುಟುಂಬಕ್ಕೆ ಸಂಬಂಧ ಇಲ್ಲದ ವ್ಯಕ್ತಿಗೆ ಆಸ್ತಿ, ಹಣ ಎಲ್ಲವನ್ನೂ ಬರೆದುಕೊಟ್ಟಿರುವ ಬಗ್ಗೆ ಹೇಳಿದ್ದೇನೆ. ದೂರು ನೀಡಿದ 48 ಗಂಟೆಯ ಒಳಗೆ ಅತ್ತೆ, ಮಾವ, ಪತ್ನಿ ಪತ್ತೆಯಾಗಿದ್ದಾರೆ. ಶಿವಾನಂದ ವಾಲಿ, ಗಂಗಾ ಕುಲಕರ್ಣಿ ಒಂದೇ ದಿನ ಫೋನ್ ಸ್ವಿಚ್ ಆಪ್ ಮಾಡಿದ್ದಾರೆ. ಅತ್ತೆ ಮಾವನಿಗೆ ವಯಸ್ಸಾಗಿದೆ. ಹೀಗಾಗಿ ಅವರು ಕಾಣಿಸಿಕೊಳ್ಳದ ಕಾರಣ ದೂರು ನೀಡಿದ್ದೆ. ಶಿವಾನಂದ ವಾಲಿ ಬಂಧನ ಆಗುತ್ತಿದ್ದಂತೆ ನನ್ಮ ಪತ್ನಿ ನನ್ನ ವಿರುದ್ಧ ಆರೋಪಗಳನ್ನ ಮಾಡಿದ್ದಾರೆ ಎಂದು ನಡೆದ ಘಟನೆಯ ಬಗ್ಗೆ ಕೆ.ಕಲ್ಯಾಣ್ ವಿವರವಾಗಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *