ಸದನದ ಬಾವಿಯಲ್ಲಿ ಶರ್ಟ್ ಬಿಚ್ಚಿ ಅಸಭ್ಯ ವರ್ತನೆ – ಸಂಗಮೇಶ್ 1 ವಾರ ಅಮಾನತು

Public TV
2 Min Read

– ಅಮಾನತು ಮಾಡಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ

ಬೆಂಗಳೂರು: ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಹೈಡ್ರಾಮಾ ನಡೆದಿದೆ. ಸದನದ ಬಾವಿಗಿಳಿದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅಂಗಿ ಬಿಚ್ಚಿ ದುರ್ವರ್ತನೆ ತೋರಿದ್ದಾರೆ. ಇದನ್ನು ಖಂಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಂದು ವಾರಗಳ ಕಾಲ ಸದನಕ್ಕೆ ಭಾಗವಹಿಸದಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಸದನದಲ್ಲಿ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಅಶಿಸ್ತು ಪ್ರದರ್ಶಿಸಿದ್ದು, ಈ ಹಿನ್ನೆಲೆ ಮಾರ್ಚ್ 12ರ ವರೆಗೆ ಸಂಗಮೇಶ್‍ರನ್ನು ಕಲಾಪದಿಂದ ಅಮಾನತು ಮಾಡಿ ಸ್ಪೀಕರ್ ಆದೇಶಿಸಿದ್ದಾರೆ. ನಿಯಮ 348ರ ಅಡಿ ಅಮಾನತು ಮಾಡಿ ಸ್ಪೀಕರ್ ಮಧ್ಯಾಹ್ನ 3 ಗಂಟೆಗೆ ಕಲಾಪ ಮುಂದೂಡಿದರು.

ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಚರ್ಚೆ ನಡೆಸುವ ಬಗ್ಗೆ ಸ್ಪೀಕರ್ ಪ್ರಸ್ತಾಪಿಸಿದರು. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಡಿಸಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಾವ ನಿಯಮಾವಳಿಗಳಲ್ಲಿ ಚರ್ಚೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ತಕ್ಷಣವೇ ಕಾಂಗ್ರೆಸ್ ನಾಯಕರು ಆಕ್ರೋಶಗೊಂಡು ಗದ್ದಲ ಎಬ್ಬಿಸಿದರು. ಅಲ್ಲದೆ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಸಂಗಮೇಶ್ ಬಾವಿಗಿಳಿದಾಗ ಶರ್ಟ್ ಬಿಚ್ಚಿ ದುರ್ವರ್ತನೆ ತೋರಿದ್ದಾರೆ.

ವಿಧಾನಸಭೆ ಕಲಾಪಕ್ಕೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ತನ್ವೀರ್ ಸೇಠ್, ಅಖಂಡ ಶ್ರೀನಿವಾಸಮೂರ್ತಿ ಕಲಾಪಕ್ಕೆ ಗೈರಾಗಿದ್ದಾರೆ ಎಂದರು. ಈ ವೇಳೆ ಸಿದ್ದರಾಮಯ್ಯರವರಿಗೆ ಸಾಥ್ ನೀಡಿದ ರಮೇಶ್ ಕುಮಾರ್ ಮತ್ತು ಹೆಚ್.ಕೆ.ಪಾಟೀಲ್ ಒನ್ ನೇಷನ್, ಒನ್ ಎಲೆಕ್ಷನ್ ಚರ್ಚೆಗೆ ಅವಕಾಶ ಕೊಟ್ಟರೆ ಕ್ರಿಯಾಲೋಪ ಆಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಮಧ್ಯೆ ಎದ್ದು ನಿಂತ ಸಿಎಂ ಬಿಎಸ್ ಯಡಿಯೂರಪ್ಪ, ಸ್ಪೀಕರ್ ಅವರು ಸಂವಿಧಾನದ ಚೌಕಟ್ಟಿನಲ್ಲೇ ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ ಸಹಕರಿಸಿ ಎಂದು ಮನವಿ ಮಾಡಿದರು.

ಈ ಎಲ್ಲ ಗೊಂದಲಗಳ ನಡುವೆ ಸ್ಪೀಕರ್ ಒಂದು ದೇಶ, ಒಂದು ಚುನಾವಣೆ ಚರ್ಚೆಯ ಪ್ರಸ್ತಾವನೆ ಓದಲು ಮುಂದುವರಿಸಿದರು. ಈ ವೇಳೆ ಇದು ಆರ್‍ಎಸ್‍ಎಸ್ ಅಜೆಂಡಾ, ಪ್ರಧಾನಿ ಡಿಕ್ಟೇಟರ್ ಎಂದು ಸಿದ್ದರಾಮಯ್ಯ ಜರಿದರು. ಅಲ್ಲದೆ ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. ಇದರಿಂದ ಕೋಪಗೊಂಡ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 19 ಜನ ಮಾತನಾಡುವವರ ಪಟ್ಟಿಯನ್ನು ಕೊಟ್ಟಿದ್ದೀರಿ. ಮೊದಲಿನಿಂದಲೂ ಇದನ್ನು ಒಪ್ಪಿಕೊಂಡು ಈಗ ಬೆಳಗ್ಗೆ ಏಕಾಏಕಿ ಬೇಡ ಅಂದರೆ ಏನು ಅರ್ಥ. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದರು.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ, ಬೇಕು ಅಂತಾನೇ ಅಂಗಿ ಬಿಚ್ಚಿದ್ದು, ನನಗೆ ವಿಷಾದ ಇಲ್ಲ. ನ್ಯಾಯ ಸಿಗಬೇಕು ಎಂದೇ ಅಂಗಿ ಬಿಚ್ಚಿದ್ದು. ನನ್ನ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಸ್ಪೀಕರ್ ಬಿಜೆಪಿ ಪರ, ನಾನು ಧರಣಿ ಮುಂದುವರಿಸುತ್ತೇನೆ. ಅಪ್ಪ, ಮಕ್ಕಳು, ಈಶ್ವರಪ್ಪ ಭದ್ರಾವತಿಯನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ನಿಂತಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *