ಸಣ್ಣ ರಾಜಕೀಯ ಮಾಡಿಲ್ಲ – ವೇದಿಕೆ ಮೇಲೆ ಬಾಲಣ್ಣ, ಗೋಪಾಲಸ್ವಾಮಿ ವಾಕ್ಸಮರ

Public TV
1 Min Read

– 21 ಕೋಟಿ ವೆಚ್ಚದ ವಿವಿಧ ಕಾಮಗಾರಿ ಶಂಕುಸ್ಥಾಪನೆ

ಹಾಸನ: ಅಧಿಕಾರಿಗಳು ಎಂಎಲ್‍ಎ ಮಾತು ಕೇಳಿ ಆಹ್ವಾನ ಪತ್ರಿಕೆಯನ್ನು ಮನೆಗೆ ತಂದು ಎಸೆದು ಹೋಗುತ್ತಾರೆ ಎಂದು ವೇದಿಕೆ ಮೇಲೆಯೇ ಕಾಂಗ್ರೆಸ್ ಎಂಎಲ್‍ಸಿ ಗೋಪಾಲಸ್ವಾಮಿ ಆರೋಪ ಮಾಡಿದ್ದು, ಅಲ್ಲೇ ಇದ್ದ ಜೆಡಿಎಸ್ ಪಕ್ಷದ ಶಾಸಕ ಬಾಲಕೃಷ್ಣ ನಾನು ಆ ರೀತಿ ನಡೆದುಕೊಂಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಇಂದು ಹಾಸನ ಜಿಲ್ಲೆಯ ಶ್ರವಣಬೆಳಗೂಳ ಕ್ಷೇತ್ರದಲ್ಲಿ ಸುಮಾರು 21 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಗೋಪಾಲಯ್ಯ ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ತಾಲೂಕಿನ ಅಭಿವೃದ್ಧಿಗೆ ತಾವು ಮಾಡಿರುವ ಹೋರಾಟದ ಬಗ್ಗೆ ಪ್ರಸ್ತಾಪಿಸಿದ ಎಂಎಲ್‍ಸಿ ಗೋಪಾಲಸ್ವಾಮಿ, ಅಧಿಕಾರಿಗಳು ಸಚಿವರ ಕಾರ್ಯಕ್ರಮಕ್ಕೆ ತಮ್ಮನ್ನು ಸರಿಯಾಗಿ ಕರೆದಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

ಈ ವೇಳೆ ಅಧಿಕಾರಿಗಳಿಗೆ ಬಹಿರಂಗ ಎಚ್ಚರಿಕೆ ನೀಡಿದ ಗೋಪಾಲಸ್ವಾಮಿ, ನಾನು ಕೂಡ ಒಬ್ಬ ವಿಧಾನಪರಿಷತ್ ಸದಸ್ಯ ಎಂಬ ಗೌರವ ಇರಲಿ. ನನಗೆ ಟಿಪಿ ನೋಡಿದ ನಂತರ ಉಸ್ತುವಾರಿ ಸಚಿವರು ಬರುತ್ತಿರುವುದು ಗೊತ್ತಾಯಿತು. ಇದು ಸಚಿವರೆದುರು ಅಧಿಕಾರಿಗಳಿಗೆ ಕೊನೆ ಎಚ್ಚರಿಕೆ. ಎಂಎಲ್‍ಎಯವರು ಹೇಳಿದರು ಎಂದು ಆಹ್ವಾನ ಪತ್ರಿಕೆಯನ್ನು ಎಸೆದು ಹೋಗುವ ಪರಿಸ್ಥಿತಿ ನಿರ್ಮಾಣ ಆಗಬಾರದು ಎಂದು ಬೇಸರ ಹೊರಹಾಕಿದರು.

ನಂತರ ಮಾತನಾಡಿದ ಶಾಸಕ ಬಾಲಕೃಷ್ಣ ಇಂದಿನ ಕಾರ್ಯಕ್ರಮ ನಡೆಯಲು ತಾವು ಪಟ್ಟ ಶ್ರಮದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ನಂತರ ಗೋಪಾಲಸ್ವಾಮಿ ಅವರ ಆರೋಪಕ್ಕೆ ವೇದಿಕೆ ಮೇಲೆ ಸಮಜಾಯಿಷಿ ನೀಡಿದ ಅವರು, ಎಂಎಲ್‍ಸಿ ಹೇಳಿದ ರೀತಿ ನಾನು ಸಣ್ಣ ರಾಜಕಾರಣ ಮಾಡಿಲ್ಲ. ಮಂತ್ರಿಗಳು ಬರುತ್ತಿದ್ದಾರೆ ಎಂದು ನಾನೇ ನಿಮಗೆ ಹೇಳಿದ್ದೆ. ಆದರೆ ನಿಮಗೆ ಆಹ್ವಾನ ಪತ್ರಿಕೆಯನ್ನು ತಡವಾಗಿ ನೀಡಿ ಎಂದು ನಾನು ಹೇಳಿಲ್ಲ. ಈ ಬಗ್ಗೆ ದಯಮಾಡಿ ತಪ್ಪಾಗಿ ತಿಳಿಯಬೇಡಿ ಎಂದು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *