ಸಚಿನ್ 190 ರನ್‍ಗೆ ಎಲ್‍ಬಿ ಆಗಿದ್ರೂ ಪ್ರೇಕ್ಷಕರ ಭಯದಿಂದ ಅಂಪೈರ್ ಔಟ್ ನೀಡಿಲ್ಲ – ಸ್ಟೇನ್

Public TV
2 Min Read

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಸಚಿನ್ ದ್ವಿಶತಕ ಹೊಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಆದರೆ ಈ ಪಂದ್ಯದಲ್ಲಿ ಸಚಿನ್ 190 ರನ್ ಗಳಿಸಿದ್ದಾಗ ಔಟಾಗಿದ್ದರೂ ಅಂಪೈರ್ ಔಟ್ ನೀಡಲಿಲ್ಲ. ಅಂಪೈರ್ ಔಟ್ ನೀಡದ್ದಕ್ಕೆ ಕಾರಣ ಪ್ರೇಕ್ಷಕರು ಎಂದು ಆಫ್ರಿಕಾದ ವೇಗಿ ಡೇಲ್ ಸ್ಟೇನ್  ಹೇಳಿದ್ದಾರೆ.

ಕೋವಿಡ್ 19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಆಟಗಾರು ಕ್ರೀಡಾ ವಾಹಿನಿಗಳ ಜೊತೆ ಮಾತನಾಡಿ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿಯಾಗಿ ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಕಾರ್ಯಕ್ರಮದಲ್ಲಿ ಜೇಮ್ಸ್ ಆಂಡರ್ಸನ್ ಅವರ ಜೊತೆ ಮಾತನಾಡಿದ ಸ್ಟೇನ್ ಸಚಿನ್ ದ್ವಿಶತಕ ಸಿಡಿಸುವ ಮೊದಲೇ ಔಟಾಗಿದ್ದರು. ಆದರೆ ಅಂಪೈರ್ ಇಯಾನ್ ಗೌಲ್ಡ್ ನನ್ನ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ಹೇಳಿದ್ದಾರೆ.

ಗ್ವಾಲಿಯರ್ ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ಮೊದಲ ದ್ವಿಶತಕ ಸಿಡಿಸಿದ್ದರು. ಈ ವೇಳೆ 190 ರನ್ ಗಳಿಸಿದ ಸಂದರ್ಭದಲ್ಲಿ ಸಚಿನ್ ಎಲ್‍ಬಿಯಾಗಿದ್ದರು. ಈ ವಿಚಾರ ಅಂಪೈರ್ ಇಯಾನ್ ಗೌಲ್ಡ್‍ಗೆ ತಿಳಿದಿತ್ತು. ಪ್ರೇಕ್ಷಕರ ಕೂಗಾಟಕ್ಕೆ ಹೆದರಿ ನಾಟೌಟ್ ನೀಡಿದ್ದರು. ಪಂದ್ಯ ಮುಗಿದ ಬಳಿಕ ನಾನು ನೇರವಾಗಿ ಅಂಪೈರ್ ಬಳಿ ಹೋಗಿ, ಯಾಕೆ ನನ್ನ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ಪ್ರಶ್ನಿಸಿದೆ. ಇದಕ್ಕೆ ಇಯಾನ್ ಗೌಲ್ಡ್, ಸುತ್ತಲೂ ಒಮ್ಮೆ ನೋಡಿ “ಔಟ್ ತೀರ್ಪು ನೀಡಿದ್ದರೆ ನಾನು ಹೋಟೆಲಿಗೆ ಮರಳುತ್ತಿರಲಿಲ್ಲ” ಎಂದು ಉತ್ತರಿಸಿದ್ದ ವಿಚಾರವನ್ನು ಈಗ ಸ್ಟೇನ್ ನೆನಪು ಮಾಡಿಕೊಂಡಿದ್ದಾರೆ.

2010ರ ಫೆ. 24 ರಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 50 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿತ್ತು.

ಸೆಹ್ವಾಗ್ 9, ದಿನೇಶ್ ಕಾರ್ತಿಕ್ 79, ಯೂಸೂಫ್ ಪಠಾನ್ 36, ಧೋನಿ ಔಟಾಗದೇ 68 ರನ್( 35 ಎಸೆತ, 7 ಬೌಂಡರಿ, 4 ಸಿಕ್ಸರ್) ಹೊಡೆದಿದ್ದರು. ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ಸಚಿನ್ ಔಟಾಗದೇ 147 ಎಸೆತದಲ್ಲಿ 200 ರನ್ ಹೊಡೆದಿದ್ದರು. ಈ ವಿಶ್ವ ದಾಖಲೆಯ ಇನ್ನಿಂಗ್ಸ್ ನಲ್ಲಿ 3 ಸಿಕ್ಸರ್, 25 ಬೌಂಡರಿಯನ್ನು ಹೊಡೆದಿದ್ದರು. 100 ರನ್ ರನ್ ಗಳು ಬೌಂಡರಿ ಮೂಲಕವೇ ಬಂದಿತ್ತು. ಕಠಿಣ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ 42.5 ಓವರ್ ಗಳಲ್ಲಿ 248 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ 153 ರನ್ ಗಳಿಂದ ಜಯಗಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *