ಸಂಸದ ಅಂಗಡಿಗೆ ಸಿಎಂ ಪಟ್ಟ ಕಟ್ಟಲು ದೆಹಲಿಯಲ್ಲಿ ನಡೆದಿತ್ತು ಸಭೆ

Public TV
2 Min Read

– 4 ತಿಂಗಳ ಹಿಂದೆ ದೆಹಲಿಯಲ್ಲಿ ಸಭೆ
– ಸೋದರ ಮಾವ ಲಿಂಗರಾಜ್ ಪಾಟೀಲ್ ಹೇಳಿಕೆ

ಬೆಳಗಾವಿ: ಯಡಿಯೂರಪ್ಪನವರನ್ನು ಸಿಎಂ ಪಟ್ಟದಿಂದ ಇಳಿಸಲು ಸಿದ್ಧತೆ ನಡೆಯುತ್ತಿದೆ ಎಂಬ ಮಾತಿನ ಬೆನ್ನಲ್ಲೇ ಈಗ ಮೃತಪಟ್ಟ ಸಂಸದ ಸುರೇಶ್‌ ಅಂಗಡಿಯವರಿಗೆ ಪಟ್ಟ ಕಟ್ಟಲು ಸಿದ್ಧತೆ ನಡೆದಿತ್ತು ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಹೌದು. ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್‌ ಅಂಗಡಿಯವರ ಸೋದರ ಮಾವ ಲಿಂಗರಾಜ್ ಪಾಟೀಲ್ ಅವರು ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಚರ್ಚೆಯಾಗಿದ್ದ ವಿಚಾರದ ಬಗ್ಗೆ ಬಾಂಬ್ ಸಿಡಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಲಿಂಗರಾಜ್‌ ಪಾಟೇಲ್‌ ಹೇಳಿದ್ದು ಏನು?
ನಾಲ್ಕು ತಿಂಗಳ ಹಿಂದೆ ಸುರೇಶ್ ಅಂಗಡಿ ಸಿಎಂ ಮಾಡುವ ಕುರಿತು ದೆಹಲಿಯಲ್ಲಿ ಸಭೆ ನಡೆದಿತ್ತು. ಕರ್ನಾಟಕ ಉಸ್ತುವಾರಿ ಮುರಳೀಧರ್‌ ರಾವ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೆಹಲಿಯ ಪ್ರಮುಖ ನಾಯಕರು ಅಂದು ಭಾಗಿಯಾಗಿದ್ದರು.

ಒಳ್ಳೆಯ, ಸಜ್ಜನ ರಾಜಕಾರಣಿ ಮತ್ತು ಲಿಂಗಾಯತ ಮುಖಂಡ ಎಂಬ ಕಾರಣಕ್ಕೆ ಸುರೇಶ್‌ ಅಂಗಡಿಯವರಿಗೆ ಸ್ಥಾನ ನೀಡಲು ಮಾತುಕತೆ ನಡೆದಿತ್ತು. ಈ ವಿಚಾರವನ್ನು ಸುರೇಶ್‌ ಅಂಗಡಿ ನನಗೆ ತಿಳಿಸಿದ್ದರು ಎಂದು ಲಿಂಗರಾಜ್‌ ಪಾಟೇಲ್‌ ಹೇಳಿದ್ದಾರೆ.

ಈ ನಡುವೆ ದುರಾದೃಷ್ಟವಶಾತ್ ಸುರೇಶ್ ಅಂಗಡಿಗೆ ವಿಧಿವಶರಾದರು. ಹೀಗಾಗಿ ಸುರೇಶ್ ಅಂಗಡಿ ಕುಟುಂಬಸ್ಥರಿಗೆ ಟಿಕೆಟ್ ನೀಡುವಂತೆ ನಾನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್‍ ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ. ಸುರೇಶ್ ಅಂಗಡಿ ಪತ್ನಿ ಮಂಗಲಾ, ಮಕ್ಕಳಾದ ಸ್ಪೂರ್ತಿ, ಶ್ರದ್ಧಾ ಇವರ ಪೈಕಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡುವಂತೆ ಲಿಂಗರಾಜ್‌ ಪಾಟೇಲ್‌ ಮನವಿ ಮಾಡಿದ್ದಾರೆ.

ವದಂತಿ ಏನಿತ್ತು?
ಕಳೆದ ಒಂದು ವರ್ಷದಿಂದ ಯಡಿಯೂರಪ್ಪ ಉತ್ತರಾಧಿಕಾರಿಯ ಬೇಟೆಯಲ್ಲಿ ತೊಡಗಿರುವ ಹೈಕಮಾಂಡ್, ಈಗಾಗಲೇ ಲಿಂಗಾಯತ ಸಮುದಾಯದ ಮೂವರು ನಾಯಕರನ್ನು ಗುರುತಿಸಿದೆ. ಅಳೆದು ತೂಗಿ ಇದರಲ್ಲಿ ಒಂದು ಹೆಸರನ್ನು ಫೈನಲ್ ಮಾಡುವುದು ಮಾತ್ರ ಬಾಕಿಯಿದೆ ಎಂಬ ಸುದ್ದಿ ಎರಡು ವಾರದ ಹಿಂದೆ ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿತ್ತು.

ಬಿಜೆಪಿಯಲ್ಲಿ 75 ವರ್ಷ ಮೀರಿದವರಿಗೆ ಅಧಿಕಾರವಿಲ್ಲ ಎಂಬ ಗೆರೆಯನ್ನು ಈಗಾಗಲೇ ಹಾಕಲಾಗಿದೆ. ಯಡಿಯೂರಪ್ಪನವರಿಗೆ ಈಗ 77 ವರ್ಷ. ಹೀಗಾಗಿ ಪಕ್ಷದ ಭವಿಷ್ಯದ ದೃಷ್ಟಿಯಿಂದ ಶೀಘ್ರ ಉತ್ತರಾಧಿಕಾರಿ ನೇಮಕಕ್ಕೆ ಹೈಕಮಾಂಡ್‌ ತಯಾರಿ ನಡೆಸುತ್ತಿದೆ.

ಬಿಎಸ್‍ವೈ ಸ್ಥಾನದಲ್ಲಿ ಲಿಂಗಾಯತರನ್ನೇ ಕೂರಿಸಲು ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ ಎನ್ನಲಾಗುತ್ತಿದೆ. ಈ ಸಂಬಂಧವಾಗಿ ಉತ್ತರ ಕರ್ನಾಟಕದ ಮೂವರು ವ್ಯಕ್ತಿಗಳ ಪೈಕಿ ಓರ್ವ ಸಂಸದರನ್ನು ಗುರುತಿಸಿದೆ. `ಆ’ ಮೂವರು ಲಿಂಗಾಯತ ನಾಯಕರ ಸಂಪರ್ಕ, ಪಕ್ಷದಲ್ಲಿ ಮಾಡಿರುವ ಕೆಲಸ ಸೇರಿದಂತೆ ಸಂಪೂರ್ಣ ಜಾತಕವನ್ನು ಹೈಕಮಾಂಡ್‌ ಕಲೆಹಾಕುತ್ತಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *