ಸಂವಿಧಾನ ಓದು ಇಂದು ಮನೆಮಾತಾಗಿದೆ: ನಾಗಮೋಹನ್ ದಾಸ್

Public TV
2 Min Read

ಬೆಂಗಳೂರು: ಮೂರು ವರ್ಷಗಳ ಹಿಂದೆ ಆರಂಭಗೊಂಡ ಸಂವಿಧಾನ ಓದು ಅಭಿಯಾನ ಆಂದೋಲನ ಸ್ವರೂಪ ಪಡೆದು ಇಂದು ರಾಜ್ಯದ ಮನೆಮಾತಾಗಿದೆ ಎಂದು ಸಂವಿಧಾನ ಓದು ಪುಸ್ತಕದ ಕರ್ತೃ ಹಾಗೂ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ತಿಳಿಸಿದರು.

ಸಮುದಾಯ-ಸಹಯಾನ-ಚಿಂತನ ಸಹಯೋಗದಲ್ಲಿ ಆಯೋಜಿಸಲಾದ ಸಂವಿಧಾನ ಓದು ಹಿನ್ನೋಟ ಮತ್ತು ಮುನ್ನೋಟ ಮೂರು ವರ್ಷದ ನೆನಪಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರಂಭದಲ್ಲಿ ಕೇವಲ 2,000 ಪ್ರತಿಗಳ ಮಾರಾಟದೊಂದಿಗೆ ಆರಂಭಗೊಂಡ ಈ ಅಭಿಯಾನ ಇಂದು 50 ಬಾರಿ ಮುದ್ರಣದೊಂದಿಗೆ 2 ಲಕ್ಷ ಪ್ರತಿಗಳ ದಾಖಲೆ ಮಾರಾಟವಾಗಿದೆ. ಅಲ್ಲದೆ ಹಿಂದಿ ಇಂಗ್ಲಿಷ್ ಭಾಷೆಗೂ ತರ್ಜುಮೆಗೊಂಡಿದೆ, ಇದೀಗ ಮಲೆಯಾಳಿಗೂ ಅನುವಾದಗೊಂಡಿದೆ. ಇದಕ್ಕೆ ರಾಜ್ಯ ಜನಪರ ಮನಸ್ಸುಗಳು ನೀಡಿದ ಸಹಾಯ ಕಾರಣವಾಗಿದೆ. ಹೀಗಾಗಿ ಈ ಆಂದೋಲನದಲ್ಲಿ ನಾನೊಬ್ಬ ಸಹಯಾನಿ ಮಾತ್ರ ಎಂದು ಅವರು ಹೇಳಿದರು. ಇದನ್ನೂ ಓದಿ: ಅಮೆರಿಕದಲ್ಲಿ ಓದಬೇಕೇ? – ವಿಶ್ವವಿದ್ಯಾಲಯಗಳ ಜೊತೆ ಮಾತನಾಡಿ, ಅನುಮಾನ ಬಗೆಹರಿಸಿಕೊಳ್ಳಿ

ಚಿಂತನದ ಪರವಾಗಿ ಡಾ.ಎಂ.ಜಿ.ಹೆಗಡೆ ಮಾತನಾಡಿ, ಈ ಸಂವಿಧಾನ ಓದು ಒಂದು ಆಂದೋಲನ ಸ್ವರೂಪ ತಾಳಲು ಕಾರಣವಾಗಿದ್ದು ಡಾ.ವಿಠ್ಠಲ ಭಂಡಾರಿ ಅವರ ಶ್ರಮ ಕಾರಣ. ಸ್ವತಃ ಒಬ್ಬ ಅಧ್ಯಾಪಕನಾಗಿ, ಸಾಂಸ್ಕೃತಿಕ ಚಳವಳಿಯ ಒಬ್ಬ ಕಾರ್ಯಕರ್ತರಾಗಿ ಅವರು ಮಾಡಿದ ಅಪರಿಮಿತ ಶ್ರಮದಿಂದಾಗಿ ಈ ಸಂವಿಧಾನ ಓದು ರಾಜ್ಯದ ಎಲ್ಲ ವಿಭಾಗಗಳ ಜನರನ್ನು ತಲುಪುವಲ್ಲಿ ಸಫಲವಾಗಿದೆ ಎಂದರು.

ಅಭಿಯಾನದಲ್ಲಿ ಪಾಲ್ಗೊಂಡ ಹಾಸನದ ಡಾ.ಭಾರತಿ ದೇವಿ ಮಾತನಾಡಿ, ಈ ಓದು ಆರಂಭಗೊಂಡಾಗ ಅದ್ಭುತ ಮತ್ತು ರೋಮಾಂಚನಗೊಳಿಸಿತ್ತು ಇವತ್ತಿನ ಸಂಕಟದ ಸಮಯದಲ್ಲಿ ನನ್ನ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಲು ಒಂದು ಸಾಧನವಾಯಿತು ಎಂದರು.

ದಾವಣಗೆರೆಯ ವಕೀಲ ಅನೀಶ್ ಪಾಷಾ ಮಾತನಾಡಿ, ಸಂವಿಧಾನ ಓದು ಪುಸ್ತಕ ಕಾನೂನಾತ್ಮಕ ದಾಟಿಯನ್ನು ಮೀರಿ ಸರಳ ಬರವಣಿಗೆಯನ್ನು ಅಳವಡಿಸಿಕೊಂಡಿದೆ. ಹೀಗಾಗಿ ಪ್ರತಿಯೊಬ್ಬರು ಓದಿ ಅರ್ಥ ಮಾಡಿಕೊಡಲು ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ವರಮಹಾಲಕ್ಮೀ ಸಂವಿಧಾನ ಓದನ್ನು ಹರಿಕಥೆ ಹಾಗೂ ಜನಪದ ಪ್ರಕಾರವಾಗಿ ಅಳವಡಿಸಿಕೊಂಡು ಪ್ರಸ್ತುತಪಡಿಸಿದರು. ನಾಡಿನಾದ್ಯಂತ ಈ ಆಂದೋಲನಲ್ಲಿ ಸಹಯಾನಿಗಳಾಗಿದ್ದ ನೂರಾರು ಕಾರ್ಯಕರ್ತರು ಆನ್‍ಲೈನ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಭಿಯಾನದಲ್ಲಿ ಖ್ಯಾತ ಗಾಯಕ ಪಿಚ್ಚಳ್ಳಿ ಶ್ರೀನಿವಾಸ, ನರಸಿಂಹಮೂರ್ತಿ ಜಾಗೃತಿ ಗೀತೆಗಳನ್ನು ಹಾಡಿದರು. ಕೆ.ಎಸ್.ವಿಮಲ, ಸಮುದಾಯದ ಅಚ್ಯುತ್, ಸಹಯಾನದ ಯನುನಾ ಗಾಂವ್ಕರ್ ಮೊದಲಾದವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *