ಸಂಯುಕ್ತ ಹೆಗ್ಡೆ ಮೇಲೆ ಹಲ್ಲೆ ಪ್ರಕರಣ- ಕವಿತಾ ರೆಡ್ಡಿ ಅರೆಸ್ಟ್, ಬಿಡುಗಡೆ

Public TV
3 Min Read

ಬೆಂಗಳೂರು: ಪಾರ್ಕ್ ಬಳಿ ವರ್ಕ್ ಔಟ್ ಮಾಡುತ್ತಿದ್ದ ನಟಿ ಸಂಯುಕ್ತ ಹೆಗ್ಡೆ ಹಾಗೂ ಸ್ನೇಹಿತರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಕಾಗ್ರೆಸ್ ನಾಯಕಿ ಕವಿತಾ ರೆಡ್ಡಿಯನ್ನು ಬಂಧಿಸಲಾಗಿದೆ.

ಹೆಚ್.ಎಸ್.ಆರ್ ಲೇಔಟ್ ಪೋಲಿಸರು ಕವಿತಾ ರೆಡ್ಡಿಯನ್ನು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದರು. ಇತ್ತ ಪ್ರಕರಣದ ಎರಡನೇ ಅರೋಪಿ ಅನಿಲ್ ರೆಡ್ಡಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಸದ್ಯ ಕವಿತಾ ರೆಡ್ಡಿ ಅವರು ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಘಟನೆಗೆ ಸಂಬಂಧಿಸಿದಂತೆ ಕವಿತಾ ರೆಡ್ಡಿ ಕ್ಷಮೆ ಕೋರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಮಾಡಿದ್ದರು. ಇದರ ನಡುವೆಯೇ ಸಂಯುಕ್ತ ಹೆಗ್ಡೆ ಹಾಗೂ ಕವಿತಾ ರೆಡ್ಡಿ ನಡುವೆ ಸಂಧಾನ ಮಾಡಲಾಗಿತ್ತು. ಆದರೆ ಸಂಧಾನ ಪತ್ರದಲ್ಲಿ ರಾಜಿಗೆ ಒಪ್ಪಿಗೆ ಇಲ್ಲ. ಒತ್ತಾಯದಿಂದ ರಾಜಿಗೆ ಸಹಿ ಮಾಡುತ್ತಿದ್ದೇನೆ ಎಂದು ಸಂಯುಕ್ತ ಹೆಗ್ಡೆ ಬರೆದಿದ್ದರು. ಪ್ರಕರಣದ 2ನೇ ಆರೋಪಿ ಅನಿಲ್ ರೆಡ್ಡಿ ವಿರುದ್ಧ ಕ್ರಮಕ್ಕೆ ಸಂಯುಕ್ತ ಮಾಡಿದ್ದರು. ಹೀಗಾಗಿ ಪೊಲೀಸರು ಐಪಿಸಿ ಸೆಕ್ಷನ್ 264ಬಿ, 323 224, 504, 509, 506 ಅಡಿ ಎಫ್‍ಐಆರ್ ದಾಖಲು ಮಾಡಿ ಕವಿತಾ ರೆಡ್ಡಿಯನ್ನು ಬಂಧಿಸಿದ್ದರು.

ಹಲ್ಲೆ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಸಂಯುಕ್ತ, ಪಾರ್ಕ್ ಬಳಿ ನಾವು  ವರ್ಕ್ ಔಟ್ ಮಾಡುತ್ತಿದ್ದಾಗ ಕವಿತಾ ರೆಡ್ಡಿ ನಮ್ಮನ್ನು ನಿಂದಿಸಿ, ಹಲ್ಲೆ ಮಾಡಲು ಯತ್ನಿಸಿದರು ಎಂದು ಆರೋಪಿಸಿದ್ದರು. ನಮ್ಮ ದೇಶದ ಭವಿಷ್ಯವು ಇಂದು ನಾವು ಏನು ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅಗರ ಕೆರೆ ಬಳಿಯ ಉದ್ಯಾನವನದಲ್ಲಿ ಕವಿತಾ ರೆಡ್ಡಿ ನಮ್ಮನ್ನು ನಿಂದಿಸಿ, ಅಸಹ್ಯಕರವಾಗಿ ವರ್ತಿಸಿದರು. ಇದಕ್ಕೆ ಸಾಕ್ಷಿದಾರರು ಹಾಗೂ ಹೆಚ್ಚಿನ ವಿಡಿಯೋ ಪುರಾವೆಗಳು ಸಹ ಇವೆ. ಈ ಕುರಿತು ಗಮನಹರಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಬೆಂಗಳೂರು ಪೊಲೀಸರಿಗೆ ಹಾಗೂ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಟ್ಯಾಗ್ ಮಾಡಿದ್ದರು.

 

View this post on Instagram

 

A post shared by Samyuktha Hegde (@samyuktha_hegde) on

ಸಿಲಿಕಾನ್ ಸಿಟಿಯ ಅಗರ ಉದ್ಯಾನವನದಲ್ಲಿ ಸಂಯುಕ್ತ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಸಾರ್ವಜನಿಕರು ವಾಕಿಂಗ್ ಮಾಡುವ ಪಾರ್ಕ್‍ನಲ್ಲಿ ಸಂಯುಕ್ತ ಹೆಗ್ಡೆ ಮತ್ತವರ ಸಂಗಡಿಗರು ಹುಲಾ ಹೂಪ್ ಡ್ಯಾನ್ಸ್ ಮಾಡಿದ್ದರು. ತುಂಡು ಬಟ್ಟೆ ತೊಟ್ಟು ಡ್ಯಾನ್ಸ್ ಮಾಡಿದ್ದಾರೆ ಎಂದು ಕವಿತಾ ರೆಡ್ಡಿ ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಕವಿತಾ ರೆಡ್ಡಿ ವಿರುದ್ಧ ನಟಿ ಸಂಯುಕ್ತ ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿ ಮಾಡಿದ್ದಾರೆ ಎಂದು ವಿಡಿಯೋ ಮೂಲಕ ಕೂಗಾಡಿದ್ದರು. ಈ ವೇಳೆ ಸ್ಥಳೀಯರು ನಟಿಯ ವಿರುದ್ಧ ಧಿಕ್ಕಾರ ಕೂಗಿ, ನಂತರ ಪಾರ್ಕ್ ಗೇಟ್ ಲಾಕ್ ಮಾಡಿ ಪೊಲೀಸರಿಗೆ ಕರೆ ಮಾಡಿದ್ದರು.

ಗೇಟ್ ಓಪನ್ ಮಾಡುವಂತೆ ಸಂಯುಕ್ತ ಮತ್ತು ಕವಿತಾ ರೆಡ್ಡಿ ನಡುವೆ ವಾಗ್ವಾದ ನಡೆದಿತ್ತು. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಆಗ ತಕ್ಷಣ ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದ ಸಂಯುಕ್ತ, ನಾನು ಏನೂ ತಪ್ಪು ಮಾಡಿಲ್ಲ. ಸುಮ್ಮನೆ ನಮ್ಮನ್ನು ಕೂಡಿ ಹಾಕಿದ್ದಾರೆ ಎಂದು ದೂರಿದ್ದರು. ನಂತರ ಪೊಲೀಸರು ಸಂಯುಕ್ತ ಹಾಗೂ ಅವರ ಸ್ನೇಹಿತರನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದರು.

ಈ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಹಲವರು ಸಂಯುಕ್ತ ಹೆಗ್ಡೆ ಪರ ಪೋಸ್ಟ್ ಮಾಡಿ, ಈ ಘಟನೆಯಲ್ಲಿ ಸಂಯುಕ್ತಾ ಅವರದ್ದು ತಪ್ಪಿಲ್ಲ. ಕವಿತಾ ರೆಡ್ಡಿಯವರದ್ದೇ ತಪ್ಪಿದೆ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಡ್ರೆಸ್ ಹೇಗೆ ಧರಿಸಬೇಕು ಎಂಬುದನ್ನು ನಟಿಯರು ತಿಳಿದುಕೊಂಡಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಕವಿತಾ ರೆಡ್ಡಿ ಪರ ಪೋಸ್ಟ್ ಮಾಡುತ್ತಿದ್ದಾರೆ. ಸಂಯುಕ್ತ ಹೆಗ್ಡೆ ಅವರ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ತುಂಬಾ ಜನ ಸಂಯುಕ್ತ ಹೆಗ್ಡೆ ಪರ ಮಾತನಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *