ಸಂಬಳ ಕಟ್ ಮಾಡಲಿ ನಾವು ತಯಾರಾಗಿದ್ದೇವೆ ಎಂದ ತಾಪ್ಸಿ

Public TV
1 Min Read

ನವದೆಹಲಿ: ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ನೇರ ಮಾತುಗಳ ಮೂಲಕವೇ ಅವರು ಚಿರಪರಿಚಿತರಾಗಿದ್ದಾರೆ. ಇದೀಗ ಲಾಕ್‍ಡೌನ್ ಹಿನ್ನೆಲೆ ಆರ್ಥಿಕತೆಯೇ ಬುಡಮೇಲಾಗಿದ್ದು, ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಸಂಬಳ ನೀಡಲು ಪರಿತಪಿಸುವಂತಾಗಿದೆ. ಹೀಗಾಗಿ ಹಲವು ಕಂಪನಿಗಳಲ್ಲಿ ಸಂಬಳ ಕಡಿತ ಮಾಡಲಾಗುತ್ತಿದೆ. ಇನ್ನು ಸಿನಿಮಾ ರಂಗದ ಸಂಬಳದ ಕುರಿತು ಸಹ ಚರ್ಚೆ ನಡೆಯುತ್ತಿದ್ದು, ಈ ಕುರಿತು ತಾಪ್ಸಿ ಪನ್ನು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ತಾಪ್ಸಿ ಬಾಲಿವುಡ್‍ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದು, ತಮ್ಮ ವಿಶಿಷ್ಠ ಸಿನಿಮಾಗಳ ಮೂಲಕವೇ ಅಭಿಮಾನಿ ವರ್ಗವನ್ನು ಗಳಿಸಿದ್ದಾರೆ. ತುಂಬಾ ವಿಭಿನ್ನ, ವಿಶೇಷ ಸಿನಿಮಾಗಳನ್ನು ಮಾತ್ರ ತಾಪ್ಸಿ ಒಪ್ಪಿಕೊಳ್ಳುತ್ತಾರೆ. ಬದ್ಲಾ, ಗೇಮ್ ಓವರ್, ಮಿಷನ್ ಮಂಗಳ್, ಸಾಂದ್ ಕಿ ಆಂಕ್ ಹಾಗೂ ತಪ್ಪಡ್ ನಂತರ ವಿಶಿಷ್ಠ ಸಿನಿಮಾಗಳಲ್ಲಿ ತಾಪ್ಸಿ ಪಾತ್ರ ನಿಭಾಯಿಸಿದ್ದಾರೆ. ತಪ್ಪಡ್ ಸಿನಿಮಾ ಮೂಲಕ ಮಹಿಳೆಯರ ಮೇಲಿನ ಶೋಷಣೆ ಕುರಿತು ಬೆಳಕು ಚೆಲ್ಲಿದ್ದಾರೆ.

ಹೀಗಿರುವಾಗಲೇ ಸಿನಿಮಾ ತಾರೆಯರ ಸಂಬಳದ ಕುರಿತ ಪ್ರಶ್ನೆಗೂ ಉತ್ತರಿಸಿರುವ ಅವರು, ಇಂತಹ ಸಂದರ್ಭದಲ್ಲಿ ನಾನು ಯಾವುದೇ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಸಂಬಳ ಸಿಗುತ್ತಿಲ್ಲ. ಮುಂದೆ ಸಂಬಳ ಕಟ್ ಮಾಡುವುದಾದರೆ ಮಾಡಲಿ. ನಾನು ಅದಕ್ಕೆ ಸಿದ್ಧಳಿದ್ದೇನೆ ಎಂದು ನೇರವಾಗಿ ಉತ್ತರಿಸಿದ್ದಾರೆ.

ಲಾಕ್‍ಡೌನ್ ಹಿನ್ನೆಲೆ ಹಲವರು ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಈ ಕುರಿತು ಹಲವು ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಹ ಉತ್ತರಿಸಿರುವ ತಾಪ್ಸಿ, ಅವರು ಸಿಟ್ಟಾಗಿರುವುದರಲ್ಲಿ ಅರ್ಥವಿದೆ. ನಿರ್ಮಾಪಕರು ಸಿಟ್ಟಾಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸಿನಿಮಾ ಬಿಡುಗಡೆಗೆ ಆತರ ಪಡಬಾರದು, ಸ್ವಲ್ಪ ಕಾಯಬೇಕು ಎಂದಿದ್ದಾರೆ. ಅಲ್ಲದೆ ದೇಶದಲ್ಲಿ ಚಿತ್ರಮಂದಿರಗಳು ನಶಿಸುವುದಿಲ್ಲ ಎಂದು ಸಹ ಹೇಳಿದ್ದಾರೆ.

ತಾಪ್ಸಿ ಪನ್ನು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸದ್ಯ ಹಸೀನ್ ದಿಲ್ರುಬಾ, ಲೂಪ್ ಲಪೇಟಾ, ಜನ ಗಣ ಮನ, ಶಹಬ್ಬಾಷ್ ಮಿತು ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದ್ದರಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *