ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಾರ್ವಜನಿಕರ ಸೇವೆಗೆ ನೆರವಾದವರೇ ಇದೀಗ ಸಂಕಷ್ಟಕ್ಕೀಡಾಗಿದ್ದಾರೆ. ಸಂಬಳ ಸಿಗದೇ ಅಂಬುಲೆನ್ಸ್ ಚಾಲಕರು ಪರದಾಡುತ್ತಿದ್ದಾರೆ. ಸಮಸ್ಯೆ ಬಗೆಹರಿಸದಿದ್ರೆ ಆತ್ಮಹತ್ಯೆ ಮಾಡಿಕೊಳ್ತೀವಿ ಅಂತ ಸಂತ್ರಸ್ತರು ಪಬ್ಲಿಕ್ ಟಿವಿ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ರಾಣ ಪಣಕ್ಕಿಟ್ಟು ಮಾಡಿದ ಕೆಲಸಕ್ಕೆ ಸಂಬಳ ಸಿಕ್ತಿಲ್ಲ. ಸಂಬಳ ನೀಡದಿದ್ರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ. ಬಿಬಿಎಂಪಿ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ತೀವಿ ಎಂದು ಅಂಬುಲೆನ್ಸ್ ಚಾಲಕರು ಹೇಳುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಚಾಲಕರು ಅಂಬುಲೆನ್ಸ್ ಅನ್ನು ಬಿಬಿಎಂಪಿಗೆ ಬಾಡಿಗೆಗೆ ಬಿಟ್ಟಿದ್ದರು. ಅಲ್ಲದೆ ಅಂಬುಲೆನ್ಸ್ ಗಳನ್ನು ಬಾಡಿಗೆಗೆ ಬಿಟ್ಟು ಚಾಲಕರು ಸಹ ಕೆಲಸ ಮಾಡಿದ್ದರು. ತಿಂಗಳಿಗೆ ಇಂತಿಷ್ಟು ಹಣ ಅಂತ ಮಾತಾಡಿ ಬಾಡಿಗೆಗೆ ಬಿಟ್ಟಿದ್ರು.
ಬಿಬಿಎಂಪಿ ಅವರು ಬೆಂಗಳೂರಿನಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆ ಹೆಚ್ಚಾದಾಗ ಖಾಸಗಿ ಅಂಬುಲೆನ್ಸ್ ಗಳನ್ನ ಬಳಸಿಕೊಂಡಿದ್ದರು. ಸುಮೂರು 150ಕ್ಕೂ ಹೆಚ್ಚು ಅಂಬುಲೆನ್ಸ್ ಗಳನ್ನು ಬಳಕೆ ಮಾಡಿಕೊಂಡಿತ್ತು. ಆದರೆ ಇದೀಗ ಅಂಬುಲೆನ್ಸ್ ಬಾಡಿಗೆ ಮತ್ತು ಚಾಲಕರ ಸುಮಾರು 5 ತಿಂಗಳ ಸಂಬಳ ಬಾಡಿಗೆ ನೀಡಿದೇ ಬಿಬಿಎಂಪಿ ಬಾಕಿ ಉಳಿಸಿಕೊಂಡಿದೆ. ಬಿಬಿಎಂಪಿ ಹಣ ನೀಡದ ಹಿನ್ನೆಲೆಯಲ್ಲಿ ಚಾಲಕರ ಬದುಕು ದುಸ್ತರವಾಗಿದೆ. ಹೀಗಾಗಿ ಚಾಲಕರು ವೀಡಿಯೋ ಮಾಡಿ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ನಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೂ ಕೊರೊನಾ ಸಮಯದಲ್ಲಿ ಬಂದು ಕೆಲಸ ಮಾಡಿದ್ದೇವೆ. ಈಗ ಜೀವನ ಮಾಡೋದು ಕಷ್ಟ ಆಗಿದೆ ದುಡ್ಡು ಕೊಡಿ. ಇಎಂಐ ಕಟ್ಟುವುದಕ್ಕೆ ಆಗುತ್ತಿಲ್ಲ, ಗಾಡಿ ಓಡಿಸುವುದಕ್ಕೆ ಆಗ್ತಿಲ್ಲ. ನಮ್ಮ ಸಮಸ್ಯೆ ಬಗೆಹರಿಸಿ ಅಂತ ಚಾಲಕರು ಕಣ್ಣೀರು ಹಾಕುತ್ತಿದ್ದಾರೆ.
ಈ ಹಿಂದೆ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದರು. ಆಗ ಜನವರಿ 14ರಂದು ಬಾಕಿ ಹಣ ಕ್ಲಿಯರ್ ಮಾಡುವುದಾಗಿ ಆಯುಕ್ತರು ಭರವಸೆ ನೀಡಿದ್ದರು. ಆದರೆ ಇದುವರೆಗೂ ಅಂಬುಲೆನ್ಸ್ ಚಾಲಕರ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಹಣ ಕ್ಲಿಯರ್ ಮಾಡದಿದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ.